ದೊಡ್ಡಬಳ್ಳಾಪುರ: ಗ್ರಾಮ ಪಂಚಾಯತ್ ಚುನಾವಣೆ ಪ್ರಾರಂಭವಾದ ದಿನದಿಂದ ಈ ಕಾಲೋನಿ ಒಮ್ಮೆಯೂ ಮೀಸಲು ಕ್ಷೇತ್ರವಾಗಿಲ್ಲ. ಸಾಮಾನ್ಯ ಅಭ್ಯರ್ಥಿ ಜೊತೆ ಸ್ಪರ್ಧಿಸಲಾಗದ ಪರಿಶಿಷ್ಟ ಜನಾಂಗದ ಕಾಲೋನಿ ನಿವಾಸಿಗಳು ಮೀಸಲು ಕ್ಷೇತ್ರಕ್ಕೆ ಪಟ್ಟು ಹಿಡಿದಿದ್ದು, ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ ನಿವಾಸಿಗಳು ದೊಡ್ಡಬಳ್ಳಾಪುರ ತಾಲೂಕಿನ ಎಸ್ಎಸ್ ಘಾಟಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಪುಟ್ಟ ಕಾಲೋನಿ ಪಾಲ್ ಪಾಲ್ ದಿನ್ನೆ. ಸುಮಾರು 80 ಮನೆಗಳಿರುವ ಈ ಕಾಲೋನಿಯಲ್ಲಿ 200ಕ್ಕೂ ಹೆಚ್ಚು ಮತದಾರರಿದ್ದಾರೆ. ಅದರಲ್ಲೂ 80 ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿವೆ. ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯದ ಸನಿಹವೇ ಇರುವ ಈ ಗ್ರಾಮಕ್ಕೆ ಪಂಚಾಯತ್ ಚುನಾವಣೆ ಪ್ರಾರಂಭವಾದ 1992ರ ಚುನಾವಣೆಯಿಂದ ಇಲ್ಲಿಯವರೆಗೂ ಒಮ್ಮೆಯೂ ಮೀಸಲು ಕ್ಷೇತ್ರವಾಗಿಲ್ಲವಂತೆ ಈ ಕಾಲೋನಿ.
ಪ್ರತಿ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಸಾಮಾನ್ಯ ಕ್ಷೇತ್ರವಾಗಿರುತ್ತದೆ. ಸಾಮಾನ್ಯ ಅಭ್ಯರ್ಥಿಯ ಜೊತೆ ಸ್ಪರ್ಧಿಸುವ ಆರ್ಥಿಕ ಬಲ ಮತ್ತು ಧೈರ್ಯ ಸಹ ಈ ಕಾಲೋನಿ ಜನರಿಗಿಲ್ಲ. ತಮ್ಮ ಕಾಲೋನಿಯ ಸಮಸ್ಯೆಗಳಿಗೆ ಧ್ವನಿಯಾಗುವ ತಮ್ಮದೇ ಜನಾಂಗದ ಅಭ್ಯರ್ಥಿಯನ್ನು ಆರಿಸುವ ಸೌಲಭ್ಯದಿಂದ ಪದೇ ಪದೆ ವಂಚಿತರಾಗುತ್ತಿದ್ದಾರೆ. ಹಾಗಾಗಿ ತಮ್ಮ ಕಾಲೋನಿಯನ್ನು ಮೀಸಲು ಕ್ಷೇತ್ರ ಮಾಡುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಗೆ ಗ್ರಾಮಸ್ಥರು ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಪಾಲ್ ಪಾಲ್ ದಿನ್ನೆ ಕಾಲೋನಿ ನಿವಾಸಿಗಳ ಪ್ರಮುಖ ನಿವೇಶನ, ಕುಟುಂಬಗಳಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಇಕ್ಕಾಟ್ಟಾದ ಸ್ಥಳಗಳಲ್ಲಿಯೇ ಕಳೆದ 40 ವರ್ಷಗಳಿಂದ ವಾಸವಾಗಿದ್ದಾರೆ. ಗ್ರಾಮದ ಪಕ್ಕದಲ್ಲಿನ ಸರ್ವೆ ನಂಬರ್ 135ರಲ್ಲಿ 5 ಎಕರೆ 20 ಗುಂಟೆ ಸರ್ಕಾರಿ ಗೋಮಾಳ ಇದೆ. ಈ ಜಾಗದಲ್ಲಿ ನಿವೇಶನ ಕೊಡುವಂತೆ ಆಗ್ರಹಿಸಿದ್ದಾರೆ. ಆದರೆ ಕಾಲೋನಿ ನಿವಾಸಿಗಳ ಬಹು ದಿನಗಳ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತು ಸಹ ನೀಡಿಲ್ಲವಂತೆ ಎಸ್.ಎಸ್. ಘಾಟಿ ಪಂಚಾಯತ್. ಒಂದು ವೇಳೆ ತಮ್ಮದೇ ಕಾಲೋನಿಯ ಜನಪ್ರತಿನಿಧಿ ಇದ್ದಿದ್ದರೆ ನಿವೇಶನಕ್ಕಾಗಿ ಪಟ್ಟು ಹಿಡಿದು ಕೇಳಬಹುದಿತ್ತು. ತಮ್ಮ ಜನಾಂಗದವರು ಪಂಚಾಯತ್ ಸದಸ್ಯರಾಗಿಲ್ಲದೆ ಇರುವುದರಿಂದ ತಮ್ಮ ಸಮಸ್ಯೆಗಳನ್ನು ಕೇಳುತ್ತಿಲ್ಲ ಅಂತಾರೆ ನಿವಾಸಿಗಳು.
ಕೆಲವು ಮಂದಿ ಹಳೇ ಮನೆಗಳನ್ನು ಕೆಡವಿ ಹೊಸ ಮನೆಗಳನ್ನು ಕಟ್ಟಲು ಮುಂದಾಗಿದ್ದಾರೆ. ಆದರೆ ಮನೆ ಕಟ್ಟುವ ಗ್ರ್ಯಾಂಟ್ ಸಹ ಬಿಡುಗಡೆ ಮಾಡಿಲ್ಲ. ಮನೆ ಇಲ್ಲದೆ ಸಂಬಂಧಿಕರ ಮನೆಯಲ್ಲಿ ವಾಸವಾಗಿರಬೇಕಾದ ಪರಿಸ್ಥಿತಿ ಇದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.