ದೇವನಹಳ್ಳಿ: ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ಆಸ್ತಿಗಾಗಿ ಜನ್ಮ ನೀಡಿದ ತಂದೆಯನ್ನೇ ಮಕ್ಕಳು ಬೀದಿ ಪಾಲು ಮಾಡಿರುವ ಘಟನೆ ನಡೆದಿದೆ. ಇಳಿ ವಯಸ್ಸಿನಲ್ಲಿ ಪೋಷಕರಿಗೆ ಒಂದೊತ್ತು ಅನ್ನ ನೀಡಲು ಹಿಂದೇಟು ಹಾಕಿದ್ದ ಕಾರಣಕ್ಕೆ ಸಂತ್ರಸ್ತ ಪಾಪಣ್ಣ ಅವರು ತಾನು ಸಂಪಾದನೆ ಮಾಡಿದ ಆಸ್ತಿಯನ್ನು ಕೋರ್ಟ್ ಮೆಟ್ಟಿಲೇರಿ ಮರಳಿ ಪಡೆದಿದ್ದರು. ಕೋರ್ಟ್ನ ಆದೇಶಕ್ಕೂ ಬೆಲೆ ಕೊಡದ ಮಕ್ಕಳು ಆಸ್ತಿಯನ್ನ ತಂದೆಗೆ ಬಿಟ್ಟು ಕೊಡದೇ ಸತಾಯಿಸುತ್ತಿದ್ದರು. ಹೀಗಾಗಿ ಬೂದಿಗೆರೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಸಂತ್ರಸ್ತ ಪಾಪಣ್ಣ ಒಂಬಟ್ಟಿಯಾಗಿ ಇಂದು ಪ್ರತಿಭಟನೆ ನಡೆಸಿದರು.
70 ವರ್ಷದ ಪಾಪಣ್ಣ ರವರಿಗೆ ಇಬ್ಬರು ಹೆಂಡತಿಯರು, ಮೊದಲ ಹೆಂಡತಿ ನಾಗರತ್ನಮ್ಮ ಮತ್ತು ಎರಡನೇ ಹೆಂಡತಿ ಭಾಗ್ಯಲಕ್ಷ್ಮೀ. ಸ್ವತಃ ಅಕ್ಕ ತಂಗಿಯರನ್ನೆ ಮದುವೆಯಾಗಿದ್ದ ಪಾಪಣ್ಣ ಅವರಿಗೆ ಇಬ್ಬರು ಗಂಡು ಮತ್ತು ಆರು ಹೆಣ್ಣು ಸೇರಿ ಎಂಟು ಜನ ಮಕ್ಕಳು. ಬೂದಿಗೆರೆಯಲ್ಲಿ ಪಾಪಣ್ಣನಿಗೆ ಸ್ವಂತ ದುಡಿಮೆಯಿಂದ ಎರಡು ಮನೆ, ಮೂರ್ನಾಲ್ಕು ಅಂಗಡಿ, ಒಂದು ಎಕರೆ ಕೃಷಿ ಭೂಮಿ ಸೇರಿದಂತೆ ಒಂದು ಸೈಟ್ ಇತ್ತು.
ಕುಟುಂಬದಲ್ಲಿ ಗಂಡು ಮಕ್ಕಳಿಗೆ ಮದುವೆಯಾದ ನಂತರ ಆಸ್ತಿ ಭಾಗದ ತಗಾದೆ ಶುರು ಆಗಿ. ಮೊದಲ ಹೆಂಡತಿ ಮಗ ಮತ್ತು ಎರಡನೇ ಹೆಂಡತಿ ಮಗ ಇಬ್ಬರು ಸೇರಿ ಸಂತ್ರಸ್ತ ಪಾಪಣ್ಣ ಮನೆಯಿಂದ ಹೊರಹಾಕಿದ್ದಾರೆ. ಬೀದಿಗೆ ಬಿದ್ದ ಪಾಪ್ಪಣ್ಣ ನ್ಯಾಯಕ್ಕಾಗಿ ದೊಡ್ಡಬಳ್ಳಾಪುರ ಎ.ಸಿ. ಕೋರ್ಟ್ ಮೆಟ್ಟಿಲೇರಿದ್ದರು, ದಾಖಲೆ ಪರಿಶೀಲಿಸಿದ್ದ ಉಪವಿಭಾಗಾಧಿಕಾರಿ ತೇಜಸ್ ಕುಮಾಪ್ ಹಿರಿಯ ನಾಗರೀಕರ ಕಾಯಿದೆ ಅನ್ವಯ ಎಲ್ಲ ಆಸ್ತಿ ಪಾಪಣ್ಣನಿಗೆ ಸೇರಬೇಕು. ಮತ್ತು ದೇವನಹಳ್ಳಿ ತಹಶೀಲ್ದಾರರು ಮತ್ತು ಬೂದಿಗೆರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಆಸ್ತಿಯನ್ನು ಪಾಪಣ್ಣನ ಸುಪರ್ದಿಗೆ ನೀಡಬೇಕೆಂದು ಸೂಚಿಸಿದ್ದರು.