ದೇವನಹಳ್ಳಿ:ಇಂದಿನಿಂದರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅರದೇಶನಹಳ್ಳಿ, ಬಸವನಪುರ ಮತ್ತು ಜಾಲಿಗೆ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದರು. ಶಾಲಾ ಮಕ್ಕಳಿಗೆ ಸಮವಸ್ತ್ರ, ಪುಸ್ತಕದೊಂದಿಗೆ ಹೂ ಕೊಟ್ಟು ಸಿಹಿ ವಿತರಣೆ ಮಾಡಿ ಮಕ್ಕಳಿಗೆ ಸ್ವಾಗತ ಕೋರಿದರು.
ಅರದೇಶನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 2023-2024ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಸಾಧನೆ ಮಾಡಬೇಕು. ಶಿಕ್ಷಣದಿಂದ ಯಾವುದೇ ಮಕ್ಕಳು ವಂಚಿತರಾಗಬಾರದು. ನೆರೆಹೊರೆಯಲ್ಲಿ ಯಾರಾದರೂ ಶಿಕ್ಷಣ ವಂಚಿತ ಮಕ್ಕಳು ಕಂಡುಬಂದಲ್ಲಿ ನಿಮ್ಮ ಸ್ನೇಹಿತರೆಂದು ತಿಳಿದು ಅವರನ್ನು ಶಾಲೆಗೆ ಕರೆದುಕೊಂಡು ಬನ್ನಿ ಎಂದು ಮಕ್ಕಳನ್ನು ಪ್ರೇರೇಪಿಸಿದರು ಹಾಗೂ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಶಿಕ್ಷಕರ, ಪೋಷಕರ ಸಹಕಾರ ಅಗತ್ಯ ಎಂದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲು ಮಕ್ಕಳಿಗೆ ಪುಸ್ತಕ ಹಾಗೂ ಸಮವಸ್ತ್ರ ನೀಡಿ, ಮಕ್ಕಳು ಶಾಲೆಗೆ ಬರುವುದೇ ಓದುವುದಕ್ಕೆ, ಪಠ್ಯಪುಸ್ತಕ ಪರಿಷ್ಕರಣೆ ಸಹ ಮುಖ್ಯವಾಗಿದೆ, ಅವುಗಳನ್ನ ಹಂತ ಹಂತವಾಗಿ ಮಾಡಲಾಗುವುದು, ಮುಖ್ಯಮಂತ್ರಿಗಳ ಮಾರ್ಗದರ್ಶನದಂತೆ ಪರಿಷ್ಕರಣೆ ಮಾಡಲಾಗುವುದು ಎಂದರು, ಇದೇ ವೇಳೆ ಪಠ್ಯಪುಸ್ತಕದಲ್ಲಿನ ಯಾವು ಪಾಠಗಳನ್ನ ತೆಗೆಯಲಾಗುತ್ತದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಮಕ್ಕಳ ಭವಿಷ್ಯ ಹಿತಕ್ಕೆ ಇರುವ ಪಾಠಗಳು ಇದ್ದೇ ಇರುತ್ತವೆ, ಇದರ ಜೊತೆಗೆ ಹೊಸ ಪಾಠಗಳನ್ನ ಸೇರಿಸುವ ಅಥವಾ ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ತಜ್ಞರು ತಿರ್ಮಾನಿಸುತ್ತಾರೆ ಎಂದರು.