ದೇವನಹಳ್ಳಿ (ಬೆಂಗಳೂರು): ಚಿಂತಕ ಹಾಗೂ ಮಾನವ ಹಕ್ಕುಗಳ ಸಕ್ರಿಯ ಪ್ರತಿಪಾದಕ ಡಾ. ಆನಂದ್ ತೇಲ್ತುಂಬ್ಡೆ ಮತ್ತು ಸಹಚರರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿದೆ. ಅವರ ಮೇಲೆ ಸುಳ್ಳು ಕೇಸು ದಾಖಲಿಸಿ ಬಂಧಿಸುವ ಮೂಲಕ ದಮನಿತ ವರ್ಗಗಳ ಪರ ಧ್ವನಿಗಳನ್ನು ಸರ್ಕಾರ ದಮನ ಮಾಡುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಈ ವೇಳೆ ಆರೋಪಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಡಿಎಸ್ಎಸ್ ಜಿಲ್ಲಾ ಸಮಿತಿ ಕಾರ್ಯಕರ್ತರು, ಮಾನವ ಹಕ್ಕುಗಳ ಹೋರಾಟಗಾರರಾದ ಆನಂದ್ ತೇಲ್ತುಂಬ್ಡೆ ಮತ್ತು ಅವರ ಸಹಚರರ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಬಂಧಿತರನ್ನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ನಂತರ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್, ಏಪ್ರಿಲ್ 14ರಂದು ದಮನಿತ ವರ್ಗಗಳು ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುತ್ತಿದ್ದರೆ, ಸರ್ಕಾರ ತಳ ಸಮುದಾಯದ ದನಿ, ನಾಗರಿಕ ಹಕ್ಕುಗಳು ಹಾಗೂ ಶಿಕ್ಷಣ ಹಕ್ಕುಗಳ ಪ್ರತಿಪಾದಕರು, ಅಂಬೇಡ್ಕರ್ ಅವರ ವಂಶಸ್ಥರೂ ಆದ ಆನಂದ್ ತೇಲ್ತುಂಬ್ಡೆ ಅವರನ್ನು ಸುಳ್ಳು ಕೇಸು ದಾಖಲಿಸಿ ಬಂಧಿಸುವ ಮೂಲಕ ದಲಿತರ ಅಸ್ಮಿತೆಗೆ ಕೊಡಲಿ ಪೆಟ್ಟು ನೀಡಿದೆ.
ದಲಿತ ಹೋರಾಟಗಾರರನ್ನು ಬಂಧಿಸಿ ಫ್ಯಾಸಿಸ್ಟ್ ಧೋರಣೆ ತಾಳುವ ಮೂಲಕ ಸಂವಿಧಾನದ ಆಶಯಗಳಿಗೆ ದಕ್ಕೆ ಉಂಟು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಂಧಿತರನ್ನು ಬಿಡುಗಡೆ ಮಾಡದೆ ಇದ್ದರೆ ಸಂಘಟನೆ ವತಿಯಿಂದ ರಾಜ್ಯದಾದ್ಯಂತ ತೀವ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಆನಂದ್ ತೇಲ್ತುಂಬ್ಡೆ, ಗೌತಮ್ ನವಲಾಕ್ ಮತ್ತು ಅವರ ಸಹಚರರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಆಯಾ ರಾಜ್ಯ ಸರ್ಕಾರಗಳು ಈ ಕೂಡಲೇ ಮಾಡಬೇಕೆಂದು ಒತ್ತಾಯಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಜಗದೀಶ್ ನಾಯ್ಕ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.