ದೊಡ್ಡಬಳ್ಳಾಪುರ: ಕುಡುಕನ ಕ್ವಾಟ್ಲೆಗೆ ಪೊಲೀಸರು ಸುಸ್ತಾಗಿ, ಆತನ ಬಾಯಿಯಿಂದ ಬರುತ್ತಿದ್ದ ಅವಾಚ್ಯ ಶಬ್ದ ಕೇಳಲಾರದೆ ಮಹಿಳಾ ಪೊಲೀಸರು ಅಲ್ಲಿಂದ ಜಾಗ ಖಾಲಿ ಮಾಡಿದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಹೌದು, ಹಗಲು ಹೊತ್ತಲೇ ಕುಡುಕನೊಬ್ಬ ಠಾಣೆಗೆ ಕುಡಿದು ಬಂದು ನನಗೆ ನ್ಯಾಯ ಬೇಕೆಂದು ರಂಪಾಟ ಮಾಡಿದ್ದಾನೆ. ಜಮೀನು ವ್ಯಾಜ್ಯದಲ್ಲಿ ತನಗೆ ಮೋಸವಾಗಿದೆಯೆಂದು ಜೋರು ಮಾಡುತ್ತಿರುವುದನ್ನು ಕಂಡ ಸಾರ್ವಜನಿಕರು ಸಮಸ್ಯೆ ಕೇಳಲು ಬಂದರೆ ನಶೆಯಲ್ಲಿದ್ದ ಆತ ಸಾರ್ವಜನಿಕರ ಮೇಲೆ ಮಣ್ಣು ಎರಚಿದ್ದಾನೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ರಂಪಾಟ ಮಾಡುತ್ತಿರುವ ಕುಡುಕ. ಈತನ ರಂಪಾಟಕ್ಕೆ ಹೆದರಿದ ಜನ ಅಲ್ಲಿಂದ ಕಾಲ್ಕಿತ್ತಿದ್ದು, ಮಹಿಳಾ ಪೇದೆಗಳು ಆತನ ಬಾಯಿಂದ ಬರುತ್ತಿದ್ದ ಅವಾಚ್ಯ ಶಬ್ದಗಳನ್ನು ಕೇಳಲಾರದೆ ಅಲ್ಲಿಂದ ದೂರ ನಡೆದಿದ್ದಾರೆ.
ಕುಡಿದ ನಶೆಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಆತ ನನಗೆ ನ್ಯಾಯಬೇಕೆಂದು ಜೋರು ಮಾಡಿದ್ದಾನೆ. ಠಾಣೆಯ ಮುಂದೆಯೇ ಪ್ರತಿಭಟನೆಯ ರೀತಿಯಲ್ಲಿ ಕೂಗಾಟ ಶುರು ಮಾಡಿದ ಈತನನ್ನು ಪೊಲೀಸ್ ಸಿಬ್ಬಂದಿ ಏನೂ ಮಾಡದ ಸ್ಥಿತಿ ನಿರ್ಮಾಣವಾಗಿಬಿಟ್ಟಿತ್ತು. ನಂತರ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಲಾಗಿ, ಸ್ಥಳಕ್ಕೆ ಬಂದ ಇನ್ಸ್ಪೆಕ್ಟರ್ ವಿಚಾರಣೆ ನಡೆಸಿ ಅಲ್ಲಿಂದ ಆತನನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.