ನೆಲಮಂಗಲದಲ್ಲಿ ಬೆಂಕಿಗಾಹುತಿಯಾದ ಕಾರು ನೆಲಮಂಗಲ(ಬೆಂಗಳೂರು ಗ್ರಾಮಾಂತರ):ಮಾರುತಿ ಕಾರಿಗೆ ಬೆಂಕಿ ತಗುಲಿ ಚಾಲಕ ಸಜೀವ ದಹನವಾದ ಘಟನೆ ನೆಲಮಂಗಲದ ಟೋಲ್ ಬಳಿ ಇರುವ ಪಾರ್ಲೆ ಜಿ ಬಿಸ್ಕೆಟ್ ಫ್ಯಾಕ್ಟರಿ ಬಳಿ ಇಂದು ನಡೆಯಿತು.
ಚಲಿಸುತ್ತಿದ್ದ ಕಾರಿನ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ನೋಡುನೋಡುತ್ತಿದ್ದಂತೆ ಇಡೀ ವಾಹನ ಹೊತ್ತಿ ಉರಿಯಿತು. ಬೆಂಕಿ ಹೆಚ್ಚಾದ ಕಾರಣ ಸ್ಥಳೀಯರು ಚಾಲಕನ ಸಹಾಯಕ್ಕೆ ಧಾವಿಸಲು ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದರು.
ಆಕಸ್ಮಿಕವಾಗಿ ಬೆಂಕಿ ತಗುಲಿ ಲಾರಿ ಭಸ್ಮ(ವಿಜಯಪುರ):ಮತ್ತೊಂದೆಡೆ,ಲಾರಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಫ್ಲೈವುಡ್ ತುಂಬಿದ್ದ ಲಾರಿ ಸುಟ್ಟು ಭಸ್ಮವಾದ ಘಟನೆ ವಿಜಯಪುರ ಜಿಲ್ಲೆಯ ಉಣ್ಣಿಭಾವಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಇಂದು ನಡೆದಿದೆ. ರಸ್ತೆಬದಿ ಲಾರಿ ನಿಲ್ಲಿಸಿ ಚಾಲಕ ಅಡುಗೆ ಮಾಡುವಾಗ ಸ್ಟವ್ ಸ್ಪೋಟಗೊಂಡು ಪಕ್ಕದಲ್ಲೇ ನಿಂತಿದ್ದ ಲಾರಿಗೆ ಬೆಂಕಿ ತಗುಲಿದೆ ಎನ್ನಲಾಗಿದೆ. ಪರಿಣಾಮ ಲಾರಿಗೆ ಬೆಂಕಿ ವ್ಯಾಪಿಸಿ ಹೊತ್ತಿ ಉರಿದಿದ್ದು, ಲಾರಿ ಸಮೇತ ಅದರಲ್ಲಿದ್ದ ಫ್ಲೈವುಡ್ ಸಹ ಸುಟ್ಟು ಭಸ್ಮವಾಗಿವೆ.
ಆಕಸ್ಮಿಕವಾಗಿ ಬೆಂಕಿ ತಗುಲಿ ಲಾರಿ ಭಸ್ಮ ನಿಡಗುಂದಿ ತಾಲೂಕಿನ ಉಣ್ಣಿಬಾವಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದಾಬಾ ಬಳಿ ನಿಲ್ಲಿಸಲಾಗಿದ್ದ ತಮಿಳುನಾಡು ಮೂಲದ ಲಾರಿ ಚಾಲಕ ಅಡುಗೆ ಮಾಡುತ್ತಿರುವಾಗ ಸ್ಟವ್‌ನಿಂದ ಸ್ಪೋಟಗೊಂಡ ಬೆಂಕಿಯಿಂದ ಈ ಅವಘಡ ಸಂಭವಿಸಿದೆ ಎಂಬ ಮಾಹಿತಿ ದೊರೆತಿದೆ. ಚಾಲಕನ ಕೈ, ಕಾಲು ಮತ್ತಿತರ ಭಾಗಗಳಿಗೆ ತೀವ್ರ ಗಾಯಗಳಾಗಿವೆ. ಕೇರಳದಿಂದ ಸೊಲ್ಲಾಪುರಕ್ಕೆ ಹೊರಟಿದ್ದ ತಮಿಳುನಾಡು ಮೂಲದ ಲಾರಿ ಇದಾಗಿದೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ದಿಢೀರ್ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು, ಪ್ರಾಣಾಪಾಯದಿಂದ ವಕೀಲರ ಕುಟುಂಬ ಪಾರು