ಆನೇಕಲ್:ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದು, ಸಾಕಪ್ಪ ಸಾಕು ಅನ್ನುವಷ್ಟು ನೀರು ಗ್ರಾಮಗಳನ್ನು ನುಂಗಿ ನೀಗಿದೆ. ಆದರೆ ಮತ್ತೊಂದೆಡೆ ರಾಜ್ಯದ ರಾಜಧಾನಿಯ ಗಡಿ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.
ಉತ್ತರದಲ್ಲಿ ನೆರೆ - ಬೆಂಗಳೂರು ಬುಡದಲ್ಲಿ ಕುಡಿಯುವ ನೀರಿಗೆ ಹಾಹಾಕಾರ! - ಮುತ್ತಾನಲ್ಲೂರು ಗ್ರಾಮ
ಒಂದೆಡೆ ಖಾಲಿ ಕೊಡಗಳು, ಹಾಳಾಗಿರುವ ವಾಟರ್ ಟ್ಯಾಂಕರ್ಗಳು. ಮತ್ತೊಂದೆಡೆ ನೀರಿಗಾಗಿ ಕಾದು ಕುಳಿತಿರುವ ಹೆಂಗಸರು, ಬಿಡುವ ನಾಲ್ಕು ಬಿಂದಿಗೆ ನೀರಿಗೆ ದಿನವಿಡೀ ಕಾಯುವ ಪರಿಸ್ಥಿತಿ, ಇವೆಲ್ಲವೂ ಬೆಂಗಳೂರಿನ ಅಂಚಿನಲ್ಲಿ ಕಾಣಬರುವ ಸಾಮಾನ್ಯ ದೃಶ್ಯಗಳು.
ನೀರಿಗೆ ಹಾಹಾಕಾರ
ತಾಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯತಿಯ ಕೊಮ್ಮಸಂದ್ರದಲ್ಲಿ ಕೆಲ ತಿಂಗಳಿಂದ ಕುಡಿಯುವ ನೀರಿಲ್ಲದೆ ಜನರು ತತ್ತರಿಸಿ ಹೋಗಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಊರಿನಲ್ಲಿ 250 ಮನೆಗಳಿಗೆ ಒಂದೇ ಒಂದು ಸಿಸ್ಟನ್ ನಲ್ಲಿ ಇದೆ. ನಲ್ಲಿಯಲ್ಲಿ ನಾಲ್ಕು ಬಿಂದಿಗೆ ನೀರು ಹಿಡಿಯಲು ಮಧ್ಯಾಹ್ನದಿಂದಲೇ ಕಾಯುವ ಪರಿಪಾಟ ಜನರದ್ದಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಯಾವೊಬ್ಬ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಭೇಟಿ ನೀಡಿಲ್ಲ ಎಂದು ಇಲ್ಲಿನ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.