ಹೊಸಕೋಟೆ: ವರದಕ್ಷಿಣೆ ಕಿರುಕುಳ ಪ್ರಶ್ನಿಸಿದ್ದಕ್ಕೆ ಹೆಂಡತಿಯ ತವರು ಮನೆಯವರ ಮೇಲೆ ಅಳಿಯ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ದೊಡ್ಡನಲ್ಲಾಳ ಗ್ರಾಮದ ನಿವಾಸಿ ಮೋಹನ ಎಂಬಾತ ಕೋವಿಡ್ ಸಂದರ್ಭದಲ್ಲಿ ನೆರೆಯ ಆಂಧ್ರದ ನಿವಾಸಿ ಭವಾನಿ ಎಂಬಾಕೆಯನ್ನು ಮನೆಯವರ ಒಪ್ಪಿಗೆಯಂತೆ ಮದುವೆಯಾಗಿದ್ದ. ಭವಾನಿ ಮನೆಯವರು ಒಂದಷ್ಟು ಹಣ, ಆಭರಣಗಳನ್ನು ಕೊಟ್ಟು ಮದುವೆ ಮಾಡಿದ್ದರು.
ಆದರೆ ಮೋಹನ ದಿನ ಕಳೆದಂತೆ ವರದಕ್ಷಿಣೆ ನೆಪದಲ್ಲಿ ಪತ್ನಿಗೆ ದೌರ್ಜನ್ಯ ನೀಡಲು ಪ್ರಾರಂಭಿಸಿದ್ದಾನೆ. ಈ ವಿಷಯವನ್ನು ಭವಾನಿ ತನ್ನ ತವರು ಮನೆಯವರ ಜೊತೆ ಹೇಳಿದಾಗ, ಇದೆಲ್ಲ ಮಾಮೂಲಿ ಅಂತ ಕುಟುಂಬಸ್ಥರು ಸುಮ್ಮನಾಗಿದ್ದರಂತೆ. ಆದರೆ ಬುಧವಾರ ಅಣ್ಣ ಮಣಿ ತಂಗಿಯನ್ನೂ ಹಬ್ಬಕ್ಕೆ ಕರೆಯಬೇಕಲ್ಲ ಎಂದು ತಂಗಿಯ ಗಂಡನ ಮನೆಗೆ ತೆರಳಿದ್ದಾನೆ. ಈ ವೇಳೆ ತಂಗಿ ಗಂಡ ಮೋಹನ ವರದಕ್ಷಿಣೆ ವಿಚಾರಕ್ಕಾಗಿ ಕೋಪಗೊಂಡು ಮನೆಯ ಬಾಗಿಲು ಹಾಕಿ ಮಣಿಯ ಕಿವಿಗೆ ಕಚ್ಚಿ ಗಾಯಗೊಳಿಸಿದ್ದಾನೆ. ಇದೇ ಸಂದರ್ಭದಲ್ಲಿ ವರದಕ್ಷಿಣೆಯನ್ನೂ ಕೇಳಿದ್ದಾನೆ.
ನಂತರ ಮಾತಿಗೆ ಮಾತು ಬೆಳೆದು ಆರೋಪಿ ಮೋಹನ, ಮಣಿಗೆ ಕಲ್ಲಿನಿಂದ ತಲೆಗೆ ಹಲ್ಲೆ ಮಾಡಿದ್ದಾನೆ. ತೀವ್ರ ಗಾಯಗೊಂಡ ಮಣಿ ತಕ್ಷಣವೇ ಮನೆಯವರಿಗೆ ಕರೆ ಮಾಡಿ ಕರೆಸಿದ್ದಾನೆ. ಬಳಿಕ ಆರೋಪಿ ತನ್ನ ಮನೆಗೆ ಬಂದಿದ್ದ ಪತ್ನಿಯ ಕುಟುಂಬಸ್ಥರ ಮೇಲೂ ಹಲ್ಲೆ ಮಾಡಿದ್ದಾನೆ. ಇದರಿಂದ ಮೋಹನನ ಬಾವನ ಕಾಲು ಮುರಿದಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದಾಗಿ ಹಲ್ಲೆಗೆ ಒಳಗಾದವರು ಹೊಸಕೋಟೆ ಸರ್ಕಾರಿ ಆಸ್ವತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ.