ದೊಡ್ಡಬಳ್ಳಾಪುರ:ಜಿಲ್ಲೆಯ ದೊಡ್ಡ ಬೆಳವಂಗಲ ಎಂಬಲ್ಲಿ ಇತ್ತೀಚೆಗೆ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದಾಗ ವಾಹನ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದು ಇಬ್ಬರು ಯುವಕ ಹತ್ಯೆ ನಡೆದಿತ್ತು. ಪ್ರಕರಣ ಸಂಬಂಧ ಇಂದು ಮುಂಜಾನೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೋಡಿ ಕೊಲೆ ಆರೋಪಿಗಳನ್ನು ಎನ್ಕೌಂಟರ್ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಇತ್ತೀಚೆಗೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ.
ಏನಿದು ಪ್ರಕರಣ?: ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಫೆಬ್ರವರಿ 17 ರಂದು ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ಶಿವರಾತ್ರಿ ಹಿನ್ನೆಲೆಯಲ್ಲಿ ಕ್ರಿಕೆಟ್ ಪಂದ್ಯಾವಳಿ ಅಯೋಜನೆ ಮಾಡಲಾಗಿತ್ತು. ಮೈದಾನದಲ್ಲಿ ಗಾಡಿ ಪಾರ್ಕಿಂಗ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಇದನ್ನೇ ನೆಪವಾಗಿಟ್ಟುಕೊಂಡ ಆರೋಪಿಗಳು ಭರತ್ ಮತ್ತು ಪ್ರತೀಕ್ ಎಂಬವರ ಹೊಟ್ಟೆ ಭಾಗ ಮತ್ತು ಗುಪ್ತಾಂಗಕ್ಕೆ ಚಾಕು ಇರಿದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದರು.
ಗ್ರಾಮಸ್ಥರಿಂದ ಪ್ರತಿಭಟನೆ:ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈ ಮೊದಲು ದೊಡ್ಡಬಳ್ಳಾಪುರದಲ್ಲಿ ಇಂತಹ ಪ್ರಕರಣಗಳು ವರದಿಯಾಗಿರಲಿಲ್ಲ. ನಿನ್ನೆಯಷ್ಟೇ ಕೊಲೆ ಆರೋಪಿಗಳನ್ನು ಎನ್ಕೌಂಟರ್ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ಮೃತ ಯುವಕರ ಕುಟುಂಬಗಳಿಗೆ ಸಂತ್ವಾನ ಹೇಳಲು ಬಂದಿದ್ದ ಸಚಿವ ಎಂ.ಟಿ.ಬಿ ನಾಗರಾಜ್ಗೆ ಮುತ್ತಿಗೆ ಹಾಕಿದ್ದರು.