ದೊಡ್ಡಬಳ್ಳಾಪುರ: ತಾಲೂಕಿನ ಮದುರೆ ಸಮೀಪದ ಹೊನ್ನಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಪಾಡಿಪುರ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ನೀರಿನ ಸಮಸ್ಯೆ ತಲೆದೋರಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಆದರೆ ಟ್ಯಾಂಕರ್ನಲ್ಲಿ ಐದಾರು ಬಿಂದಿಗೆಯ ನೀರು ಯಾವುದಕ್ಕೂ ಸಾಕಾಗುವುದಿಲ್ಲವೆಂದು ಗ್ರಾಮಸ್ಥರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಐದಾರು ಬಿಂದಿಗೆ ನೀರಿನಲ್ಲಿ ಹಸುಗಳ ಸಾಕಾಣಿಕೆ, ದಿನನಿತ್ಯದ ಬಳಕೆಗೆ ಹೇಗೆ ಸಾಧ್ಯವಾಗುತ್ತದೆ ಎಂದು ಗ್ರಾಮಸ್ಥರು ಕೇಳುತ್ತಿದ್ದಾರೆ. ಇದರ ನಡುವೆ ನೀರಿನ ಜಗಳಕ್ಕೆ ಜಾತಿ ಮತ್ತು ಓಟು ರಾಜಕೀಯ ಬೇರೆ ಬೆರೆತಿದೆ. ಗ್ರಾಮದ ಒಂದೊಂದು ಬೀದಿಯಲ್ಲಿ ನಿಲ್ಲುವ ಟ್ಯಾಂಕರ್ನಿಂದ ಗ್ರಾಮಸ್ಥರು ನೀರು ಹಿಡಿಯುತ್ತಾರೆ. ದಲಿತರ ಮನೆ ಮುಂದೆ ನಿಲ್ಲುವ ಟ್ಯಾಂಕರ್ ಬಳಿ ಹೋಗಿ ನೀರು ಹಿಡಿಯಲು ಮೇಲ್ವರ್ಗದವರ ತಕರಾರು ಇದೆ. ಅವರ ಮನೆಯ ಮುಂದೆಯೇ ಟ್ಯಾಂಕರ್ ನಿಲ್ಲಬೇಕೇ, ನಾವೇಕೆ ಅಲ್ಲಿಯೇ ಹೋಗಿ ನೀರು ಹಿಡಿಯಬೇಕು ಎಂದು ಮೇಲ್ವರ್ಗದವರು ತಕರಾರು ಎತ್ತಿದ್ದಾರೆ.