ದೊಡ್ಡಬಳ್ಳಾಪುರ: ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ಜೊತೆ ಮೈತ್ರಿಗೆ ಆಸಕ್ತಿ ತೋರಿಸದ ಹಿನ್ನಲೆ, ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಿದ್ದು, ಬಿಜೆಪಿಯ ಸುಧಾರಾಣಿ ಲಕ್ಷ್ಮೀ ನಾರಾಯಣ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.
ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ ದೊಡ್ಡಬಳ್ಳಾಪುರ ನಗರಸಭೆಗೆ ಸೆಪ್ಟೆಂಬರ್ 3 ರಂದು ಚುನಾವಣೆ ನಡೆದು ಸೆಪ್ಟೆಂಬರ್ 6 ರಂದು ಮತ ಎಣಿಕೆ ಕಾರ್ಯ ನಡೆದಿತ್ತು. ಈ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿರಲಿಲ್ಲ. ಬಿಜೆಪಿ - 12, ಕಾಂಗ್ರೆಸ್ -9, ಜೆಡಿಎಸ್-7, ಪಕ್ಷೇತರರು -3 ಸ್ಥಾನಗಳನ್ನ ಪಡೆದಿದ್ದರಿಂದ, ಫಲಿತಾಂಶ ಅತಂತ್ರವಾಗಿತ್ತು. ಅಧ್ಯಕ್ಷ ಸ್ಥಾನ ಯಾವ ಪಕ್ಷಕ್ಕೆ ಸಿಗುತ್ತೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿತ್ತು.
ಜೆಡಿಎಸ್ಗೆ ಉಪಾಧ್ಯಕ್ಷ ಪಟ್ಟ
ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಜೆಡಿಎಸ್ ಬೆಂಬಲ ನೀಡಿದ ಹಿನ್ನೆಲೆ ಬಿಜೆಪಿಯ ಸುಧಾರಾಣಿ ಲಕ್ಷ್ಮಿನಾರಾಯಣ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಜೆಡಿಎಸ್ ಪಕ್ಷದ ಫರ್ಹನಾ ತಾಜ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ನಗರಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುಧಾರಾಣಿ ಅವರಿಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಇಬ್ಬರು ಪಕ್ಷೇತರರು, ಒಬ್ಬರು ಸಂಸದರು ಮತ ಸೇರಿ 22 ಮತಗಳು ಬಂದಿದ್ದು, ಅಧ್ಯಕ್ಷರಾಗಿ ಜಯಗಳಿಸಿದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್ ನಾಗವೇಣಿ ಪರ ಕಾಂಗ್ರೆಸ್ 9 ಸದಸ್ಯರು, ಒಬ್ಬ ಪಕ್ಷೇತರರು, ಶಾಸಕರ ಮತ ಸೇರಿ 11 ಮತ ಪಡೆದು ಸೋಲನುಭವಿಸಿದರು.
ಜೆಡಿಎಸ್‌ನಿಂದ ಉಪಾದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಫರ್ಹಾನಾ ತಾಜ್‌ಗೆ 22 ಮತಗಳು ಲಭಿಸಿ ಜಯಗಳಿಸಿದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಅಧಿಕಾರಾವಧಿಯನ್ನ 30 ತಿಂಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ್, ಪೌರಡಳಿತ ಸಚಿವ ಎಂಟಿಬಿ ನಾಗರಾಜ್, ಜೆಡಿಎಸ್ ಎಮ್ಎಲ್ಸಿ ರಮೇಶ್ ಗೌಡ, ಸಂಸದ ಬಚ್ಚೇಗೌಡರು ಇದ್ದರು.
ಕುಮಾರಣ್ಣನ ಜತೆ ತಿಂಗಳ ಹಿಂದೆಯೇ ಮಾತನಾಡಿದ್ದೆ : ಆರ್.ಅಶೋಕ್
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವಿಚಾರವಾಗಿ ಕಳೆದೊಂದು ತಿಂಗಳಿಂದ ಕುಮಾರಣ್ಣನ ಜೊತೆ ಅವರ ತೋಟಕ್ಕೆ ಹೋಗಿ ಚರ್ಚೆ ಮಾಡಿದ್ದೆ. ಆಗ ಕಾಂಗ್ರೆಸ್ ನಮಗೆ ಮೋಸ ಮಾಡಿದೆ ಕಾಂಗ್ರೆಸ್ ನಂಬಿಕೆಗೆ ಅರ್ಹವಾದ ಪಕ್ಷವಲ್ಲ ಅಂತ ಹೇಳಿದ್ದರು. ಬಿಜೆಪಿಗೆ ಬೆಂಬಲ ನೀಡಲು ನಮ್ಮ ವರಿಷ್ಠರು ದೊಡ್ಡಬಳ್ಳಾಪುರ ಮುಖಂಡರ ಜೊತೆ ಮಾತನಾಡ್ತೇನಿ ಅಂತ ಹೇಳಿದ್ದರು. ಕಳೆದೊಂದು ವಾರದಿಂದ ನಿರಂತರವಾಗಿ ಅವರ ಜೊತೆ ಸಂಪರ್ಕದಲ್ಲಿದ್ದೆ, ಇದೀಗ ನಮಗೆ ಜೆಡಿಎಸ್ ಬೆಂಬಲ ಕೊಟ್ಟಿದೆ ಎಂದರು.
ಜೆಡಿಎಸ್ ಜೊತೆ ಮೈತ್ರಿಗೆ ಆಸಕ್ತಿ ತೋರದ ಕಾಂಗ್ರೆಸ್ ಹೈಕಮಾಂಡ್ :
ನಗರಸಭೆ ಚುನಾವಣೆ ಫಲಿತಾಂಶ ಬಂದ ಮರುಕ್ಷಣವೇ ನಗರಸಭೆಯ ಅಧಿಕಾರ ಹಿಡಿಯಲು ಅತ್ಯುತ್ಸಾಹ ತೋರಿದ ಬಿಜೆಪಿ, ಜೆಡಿಎಸ್ ಮುಖಂಡರನ್ನ ಭೇಟಿ ಮಾಡಿ ಮೈತ್ರಿ ಗಟ್ಟಿಮಾಡಿಕೊಂಡರು. ಸಚಿವ ಆರ್ ಅಶೋಕ್ ಕುಮಾರಸ್ವಾಮಿ ಅವರ ತೋಟದ ಮನೆಗೆ ಹೋಗಿ ಚರ್ಚೆ ನಡೆಸಿದರು. ಆದರೆ, ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ವರಿಷ್ಠರನ್ನ ಭೇಟಿ ಮಾಡುವ ಯಾವುದೇ ಪ್ರಯತ್ನ ಮಾಡಲಿಲ್ಲ, ಇದರಿಂದ ಜೆಡಿಎಸ್ ಹೈಕಮಾಂಡ್ ಬಿಜೆಪಿ ಜೊತೆ ಕೈಜೋಡಿಸಿದೆ.