ದೊಡ್ಡಬಳ್ಳಾಪುರ: ಒಟ್ಟು 16 ಸಂಖ್ಯಾಬಲವನ್ನ ಹೊಂದಿರುವ ದೊಡ್ಡಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಅಚ್ಚರಿಯಾಗಿದೆ.
ಈ ಮೊದಲು ಕಾಂಗ್ರೆಸ್ ಹಿರಿಯ ಮುಖಂಡ, ಎಪಿಎಂಸಿ ಸದಸ್ಯ ಗೋವಿಂದರಾಜು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ವಿಶ್ವನಾಥ್ ರೆಡ್ಡಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ನೂತನ ಅಧ್ಯಕ್ಷ ವಿಶ್ವನಾಥ ರೆಡ್ಡಿ ಇನ್ನೂ ಜೆಡಿಎಸ್ನಿಂದ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದ ಬಿ.ವಿ ಲೋಕೇಶ್ ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಹೀಗಾಗಿ ವಿಶ್ವನಾಥ್ ರೆಡ್ಡಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಶ್ವನಾಥ್ ಮಾತನಾಡಿ, ಎಪಿಎಂಸಿಯ ಎಲ್ಲ ಸದಸ್ಯರ ಬೆಂಬಲದಿಂದ ನಾನು ಆಯ್ಕೆಯಾಗಿದ್ದೇನೆ. ಮುಂದೆ ರೈತರು-ವರ್ತಕರು ಮಧ್ಯೆ ಇರುವ ಸಮಸ್ಯೆಗಳು, ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಕಾಟಕ್ಕೆ ಇತಿಶ್ರೀ ಹಾಡಿ ಎಪಿಎಂಸಿಯ ಅಭಿವೃದ್ಧಿಗೆ ಶ್ರಮಿಸಲಿದ್ದೇನೆ ಎಂದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್ನ ಎಲ್ಲ ಹಿರಿಯ ನಾಯಕರ ಮಾತಿನಂತೆ ಗೋವಿಂದರಾಜು ಹಿಂದೆ ಸರಿದಿದ್ದಾರೆ. ವಿಶ್ವನಾಥ್ ಆಯ್ಕೆಯಲ್ಲಿ ಯಾರಿಗೂ ಅಸಮಾಧಾನವಿಲ್ಲ. ಎಪಿಎಂಸಿ ಅಭಿವೃದ್ಧಿಗೆ ವಿಶ್ವನಾಥ್ ರೆಡ್ಡಿಗೆ ನಾನು ಸಹಾಯ ಮಾಡುತ್ತೇನೆ ಎಂದು ಅಭಯ ನೀಡಿದರು.