ದೊಡ್ಡಬಳ್ಳಾಪುರ:ತಾಲೂಕಿನ ಕರೇನಹಳ್ಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ವೃದ್ಧೆಯೊಬ್ಬರು ಹೊಂಗೆಕಾಯಿ ಆಯುತ್ತಿದ್ದರು, ಇದೇ ಸಮಯದಲ್ಲಿ ಹೊಂಗೆಕಾಯಿ ಉದುರಿಸುವ ನೆಪದಲ್ಲಿ ವೃದ್ಧೆಯ ಸಹಾಯಕ್ಕೆ ಬಂದ ದುಷ್ಕರ್ಮಿಗಳು ವೃದ್ದೆಯ ಬಾಯಿಗೆ ಬಟ್ಟೆ ತುರುಕಿ ಆಕೆಯ ಮಾಂಗಲ್ಯ ಸರ ಸೇರಿದಂತೆ ಧರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಕರೇನಹಳ್ಳಿಯಲ್ಲಿ ಮಾರ್ಚ್ 9 ರಂದು ಘಟನೆ ನಡೆದಿದ್ದು, ಘಟನೆಯಲ್ಲಿ ಸುಮಾರು 72 ವರ್ಷದ ವೃದ್ಧೆ ನಾರಾಯಣಮ್ಮ, ತಮ್ಮ ಮಾಂಗಲ್ಯ ಸರ, 2 ಲಕ್ಷ್ಮಿ ಕಾಸು, ಕರಿಮಣಿ, ಚಿನ್ನದ ಗುಂಡುಗಳನ್ನ ಕಳೆದು ಕೊಂಡಿದ್ದಾರೆ.
ಘಟನೆ ಹಿನ್ನಲೆ :ವೃದ್ದೆ ನಾರಾಯಣಮ್ಮ ಪ್ರತಿದಿನ ತನ್ನ ಬಳಿ ಇದ್ದ ಮೂರು ಮೇಕೆಗಳನ್ನು ಮೇಯಿಸಲು ಗ್ರಾಮದ ಹೊರವಲಯದ ಜಮೀನಿನ ಬಳಿ ಬರುತ್ತಿದ್ದರು. ಇದೇ ವೇಳೆ ಹೊಂಗೆಮರದಡಿ ಬೀಳುವ ಕಾಯಿಗಳನ್ನು ಆಯ್ದುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ್ದ ಕಳ್ಳರು ‘‘ಏನ್ ಅಜ್ಜಿ ಇವತ್ತು ಮೇಕೆ ಹೊಡೆದುಕೊಂಡು ಬಂದಿಲ್ಲ’’ ಎಂದು ಅಜ್ಜಿಯನ್ನು ಮಾತಿಗಿಳಿಸಿದ್ದಾರೆ. ಅಜ್ಜಿಯನ್ನು ಮಾತಿನ ಬಲೆಗೆ ಬೀಳಿಸಿ ಒಳ್ಳೆಯ ಹುಡುಗರಂತೆ ನಟಿಸಿ ಅಜ್ಜಿಯ ಮನ ಗೆದ್ದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಈ ಕೃತ್ಯವನ್ನು ಎಸಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.
ಇದನ್ನೂ ಓದಿ :ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣದ ಪ್ಲಾಸ್ಟಿಕ್ ಡ್ರಮ್ನಲ್ಲಿ ಮಹಿಳೆಯ ಶವ ಪತ್ತೆ!