ದೊಡ್ಡಬಳ್ಳಾಪುರ: ಗರ್ಲ್ ಫ್ರೆಂಡ್ಸ್‌ಗಳಿಗಾಗಿ ದೇವಾಲಯಗಳ ಕಾಣಿಕೆ ಹುಂಡಿಗಳಿಗೆ ಕನ್ನ ಹಾಕಿ, ಆ ಹಣದಿಂದ ಗೆಳತಿಯರೊಂದಿಗೆ ಮೋಜು - ಮಸ್ತಿ ಮಾಡುತ್ತಿದ್ದ ಕಳ್ಳನೊಬ್ಬನನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಿಪ್ಪೇಶ್ ಎಂದು ಗುರುತಿಸಲಾಗಿದೆ. ಬಂಧಿತನಿಂದ ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಮೊಬೈಲ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದ್ದ ದೇವಾಲಯಗಳಲ್ಲಿನ ಕಾಣಿಕೆ ಹುಂಡಿ ಸರಣಿ ಕಳ್ಳತನ ಪ್ರಕರಣಗಳಲ್ಲಿ ಬಂಧಿತ ತಿಪ್ಪೇಶ್ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತಿಪ್ಪೇಶ್‌ನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಹೆಜ್ಜಾಜಿಯಲ್ಲಿ ಇತ್ತೀಚೆಗೆ ನಡೆದಿದ್ದ ಹುಂಡಿ ಕಳವು ಪ್ರಕರಣದಲ್ಲಿ ತಿಪ್ಪೇಶ್ ಹಾಗೂ ಸಹಚರರು ಭಾಗಿಯಾಗಿದ್ದರು. ಪೊಲೀಸರಿಗೆ ಕೆಲವರ ಮೇಲೆ ಅನುಮಾನ ಇತ್ತು. ಇದೇ ವೇಳೆ ಶಿರಾ ಮೂಲದ ತಂಡವೊಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ನಗರಠಾಣೆ ಪೊಲೀಸರು ರೈಲ್ವೆ ಸ್ಟೇಷನ್ ಬಳಿ ತಿಪ್ಪೇಶ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯು ದೊಡ್ಡಬಳ್ಳಾಪುರ ನಗರದ ವೆಂಕರಮಣಸ್ವಾಮಿ ರಥೋತ್ಸವದ ವೇಳೆ ಬೈಕ್ ಕಳವು ಪ್ರಕರಣ ಹಾಗೂ ದೊಡ್ಡಬೆಳವಂಗಲ ಠಾಣಾ ವ್ಯಾಪ್ತಿಯ ಚಿಕ್ಕಹೆಜ್ಜಾಜಿ ದೇವಾಲಯದಲ್ಲಿ ಹುಂಡಿ ಕಾಣಿಕೆ ಕಳವು ಪ್ರಕರಣ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಇದೇ ವೇಳೆ, ಪತ್ತೆಯಾಗಿದೆ. ತಿಪ್ಪೇಶ್ ಹಾಗೂ ಇನ್ನಿಬ್ಬರು ಸಹಚರರು ಜಾತ್ರೆ ಉತ್ಸವಗಳಲ್ಲಿ ದ್ವಿಚಕ್ರವಾಹನಗಳನ್ನು ಕದ್ದು ಕೃತ್ಯಕ್ಕೆ ಬಳಸುತ್ತಿದ್ದರು. ಹೆಚ್ಚಿನ ಕಾಣಿಕೆ ಹಣ ಸಂಗ್ರಹವಾಗಿರುವ ದೇವಸ್ಧಾನವನ್ನು ಗುರಿಯಾಗಿಸಿಕೊಂಡು ಆರೋಪಿಗಳು ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.