ದೊಡ್ಡಬಳ್ಳಾಪುರ :ಅಪಘಾತ ತಡೆ, ವಾಹನ ದಟ್ಟಣೆ ನಿಯಂತ್ರಣ, ಸರ್ಕಾರಿ ಜಾಗ ಉಳಿಸುವ ನಿಟ್ಟಿನಲ್ಲಿರಸ್ತೆ ಬದಿಯ ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯನ್ನು ದೊಡ್ಡಬಳ್ಳಾಪುರ ನಗರಸಭೆ ಇಂದಿನಿಂದ ಆರಂಭಿಸಿದೆ.
ಕಾರ್ಯಾಚರಣೆಗೆ ಬೀದಿ ವ್ಯಾಪಾರಿಗಳಿಂದ ವಿರೋಧ ವ್ಯಕ್ತವಾಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ಅಳಲು ತೋಡಿಕೊಂಡರು. ಏಕಾಏಕಿ ತೆರವು ಕಾರ್ಯಚರಣೆ ಮಾಡುತ್ತಿರುವುದು ಮತ್ತು ಬೀದಿ ಬದಿಯ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಬೀದಿ ಬದಿಯ ವ್ಯಾಪಾರಿ ಚೈತ್ರಾ ಮಾತನಾಡಿ, ನಾವು ಕಳೆದ 20 ವರ್ಷಗಳಿಂದ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಇದೀಗ ಏಕಾಏಕಿ ತೆರವುಗೊಳಿಸಲು ಮುಂದಾಗಿರುವುದು ಏಕೆ?. ನಮಗೆ ನಗರಸಭೆಯವರು ಅನ್ಯಾಯ ಮಾಡುತ್ತಿದ್ದಾರೆ. ಒಂದು ನಿಮಿಷ ಕೂಡ ಇಲ್ಲಿರಲು ಬಿಡುತ್ತಿಲ್ಲ. ಸಾಮಗ್ರಿ ಚೆಲ್ಲಾಪಿಲ್ಲಿ ಮಾಡುತ್ತಿದ್ದಾರೆ. ವ್ಯಾಪಾರ ನಂಬಿಕೊಂಡು ಸಾಲ ಮಾಡಿಕೊಂಡಿದ್ದೇವೆ. ಮಕ್ಕಳನ್ನು ಸಾಕಬೇಕು. ಹೆಣ್ಣ ಮಕ್ಕಳಾಗಿ ಹೊರಗೆ ಬಂದು ಕೆಲಸ ಮಾಡಿ ಮನೆ ನಿರ್ವಹಣೆ ಮಾಡುತ್ತಿದ್ದೇವೆ. ಯಾರೂ ಒಂದು ರೂಪಾಯಿ ಸಹಾಯ ಮಾಡಿಲ್ಲ. ಈ ರೀತಿ ಮಾಡುತ್ತಿರುವುದರಿಂದ ನಾವು ಏನು ಮಾಡೋದು ಎಂಬುದು ತಿಳಿಯುತ್ತಿಲ್ಲ. ಹೀಗಾಗಿ ಅವರಿಂದ ಯಾವುದೇ ಸಹಾಯ ಬೇಕಿಲ್ಲ. ವ್ಯಾಪಾರ ಮಾಡಲು ಜಾಗ ಕೊಟ್ಟರೆ ಸಾಕು. ಅವರು ಹೇಳಿದಂತೆ ರೂಲ್ಸ್ ಪಾಲನೆ ಮಾಡುತ್ತೇವೆ ಎಂದರು.