ದೊಡ್ಡಬಳ್ಳಾಪುರ : ಲಾಕ್ ಡೌನ್ ಸಮಯದಲ್ಲಿ ಜನರ ಹಸಿವು ನೀಗಿಸಲು ಶಾಸಕ ಟಿ. ವೆಂಕಟರಮಣಯ್ಯ ನೇತೃತ್ವದಲ್ಲಿ ನಗರದಲ್ಲಿ ಒಂದು ತಿಂಗಳು 40 ಕೇಂದ್ರಗಳಲ್ಲಿ ಅನ್ನದಾಸೋಹ ಮಾಡಿ, ಪ್ರತಿದಿನ 15 ಸಾವಿರ ಜನರಿಗೆ ಆಹಾರ ವಿತರಣೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ನಗರದಲ್ಲಿ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಹೆಚ್ಚಿನ ನೇಕಾರಿಕೆ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ನೇಕಾರಿಕೆ ನಿಂತು ಹೋಗಿತ್ತು, ಕೈಗಾರಿಕೆಗಳ ಬಾಗಿಲು ಬಂದ್ ಆಗಿದ್ದವು. ಆ ಸಮಯದಲ್ಲಿ ನಗರದ ಉದ್ಯಮಿಗಳು ಮತ್ತು ದಾನಿಗಳ ನೆರವಿನಿಂದ ಶಾಸಕ ಟಿ. ವೆಂಕಟರಮಣಯ್ಯ ಆಹಾರ ವಿತರಣೆ ಮಾಡಿದ್ದರು.
ಮಾರ್ಚ್ 31 ರಿಂದ ಪ್ರಾರಂಭವಾದ ಶಾಸಕರ ಅನ್ನದಾಸೋಹ ಕಾರ್ಯಕ್ರಮ ಜೂನ್ 30ಕ್ಕೆ ಅಂತ್ಯವಾಗಿದೆ. ನಗರದ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಆಹಾರ ತಯಾರಿಸಿ 40 ಕೇಂದ್ರಗಳಲ್ಲಿ ವಿತರಣೆ ಮಾಡಲಾಗುತ್ತಿತ್ತು. ಪ್ರತಿದಿನ 15 ಸಾವಿರಕ್ಕೂ ಅಧಿಕ ಮಂದಿ ಆಹಾರ ಪಡೆಯುತ್ತಿದ್ದರು.