ದೊಡ್ಡಬಳ್ಳಾಪುರ: ತಾಲೂಕಿನ ಪಾಲನಜೋಗಿಹಳ್ಳಿ ಮಾ.7 ರಂದು ಅದ್ದೂರಿ ಕರಗ ಮಹೋತ್ಸವಕ್ಕೆ ಸಿದ್ಥತೆಯನ್ನ ಮಾಡಿಕೊಂಡಿದ್ದರು. ಆದರೆ ಪಕ್ಕದ ಊರಿನಲ್ಲಿ ನಡೆಯುವ ಕರಗ ಮಹೋತ್ಸವ ಆಕರ್ಷಣೆ ಕಳೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕರಗ ಮಹೋತ್ಸವಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ಸಹ ಸಲ್ಲಿಕೆಯಾಗಿತ್ತು. ಆದರೆ ಇತ್ತೀಚೆಗೆ ತಾಲೂಕಿನಲ್ಲಿ ನಡೆದ ಜೋಡಿ ಕೊಲೆಯಿಂದ ಅಶಾಂತಿಯ ವಾತಾವರಣವಿದೆ. ಹೀಗಾಗಿ ಗ್ರಾಮದಲ್ಲಿ ಶಾಂತಿ ಸುವ್ಯವಸ್ಧೆಗಾಗಿ ಕರಗ ಮಹೋತ್ಸವನ್ನು ರದ್ದು ಮಾಡಲಾಗಿದೆ.
ಉತ್ಸವದ ಬಗ್ಗೆ ಭಿತ್ತಿ ಪತ್ರ ಹಂಚಿ ಪ್ರಚಾರ ಮಾಡಲಾಗಿದೆ.. ದೊಡ್ಡಬಳ್ಳಾಪುರ ಹೊರವಲಯದ ಪಾಲನಜೋಗಿಹಳ್ಳಿಯಲ್ಲಿ ಕಳೆದ 2 ವರ್ಷಗಳಿಂದ ಅದ್ಧೂರಿ ಕರಗ ಮಹೋತ್ಸವ ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು. ಶ್ರೀ ಸಪ್ತಮಾತೃಕೆ ಮಾರಿಯಮ್ಮ ಸೇವಾ ಟ್ರಸ್ಟ್ ವತಿಯಿಂದ ತಾಲೂಕಿನಲ್ಲಿಯೇ ಆಕರ್ಷಕವಾಗಿ ಹೂವಿನ ಕರಗ ಮಹೋತ್ಸವವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮಾರ್ಚ್ 7 ರಂದು ಮೂರನೇ ವರ್ಷದ ಕರಗ ಮಹೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಭಿತ್ತಿ ಪತ್ರಗಳನ್ನು ಹಂಚಿ ಪ್ರಚಾರ ಸಹ ಮಾಡಲಾಗಿತ್ತು. ಆದರೆ ನೆರೆಯ ಮಲ್ಲತ್ತಹಳ್ಳಿ, ವಡ್ಡರಹಳ್ಳಿಪಾಳ್ಯ, ತೂಬಗೆರೆಪೇಟೆ, ಚಿಕ್ಕಪೇಟೆ, ದೊಡ್ಡಪೇಟೆ ಹಾಗೂ ಕೊನಘಟ್ಟ ಗ್ರಾಮದ ಸಮುದಾಯದವರು ಕರಗ ಮಹೋತ್ಸವಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಪಾಲನಜೋಗಿಹಳ್ಳಿ ಕರಗ ಮಹೋತ್ಸವವನ್ನು ರದ್ದು ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರು ತಿಳಿಸಿದ್ದಾರೆ.
ಬಹಳ ವರ್ಷಗಳಿಂದ ಮಲ್ಲತ್ತಹಳ್ಳಿಯಲ್ಲಿ ನಡೆಯುವ ಕರಗ ಮಹೋತ್ಸವ ಆಚರಣೆಯಲ್ಲಿ ಪಾಲನಜೋಗಿಹಳ್ಳಿಯ ಜನರು ಭಾಗವಹಿಸುತ್ತಿದ್ದರು. ಅಲ್ಲಿನ ಕರಗ ಪಾಲನಜೋಗಿಹಳ್ಳಿಗೂ ಬಂದು ಹೋಗುತ್ತಿತ್ತು. ಆದರೆ ಮೂರು ವರ್ಷಗಳಿಂದ ಮಲ್ಲತ್ತಹಳ್ಳಿಯ ಕರಗ ಪಾಲನಜೋಗಿಹಳ್ಳಿಗೆ ಬರೋದು ನಿಂತು ಹೋಗಿದೆ. ಪಾಲನಜೋಗಿಹಳ್ಳಿ ಗ್ರಾಮದಲ್ಲಿ ವಹ್ನಿಕುವ ಕ್ಷತ್ರಿಯ ಸಮಾಜದ 16 ಕುಟುಂಬಗಳಿದ್ದು, ಎರಡು ವರ್ಷಗಳಿಂದ ಕತ್ತಿ ಮಾರಮ್ಮ ದೇವಸ್ಥಾನದಲ್ಲಿ ಕರಗ ಮಹೋತ್ಸವ ಆಚರಣೆಯನ್ನು ಪ್ರಾರಂಭಿಸಿದರು.