ದೊಡ್ಡಬಳ್ಳಾಪುರ:ತಾಲೂಕಿನಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಷಕಾರಿ ತ್ಯಾಜ್ಯ ನೀರು ದೊಡ್ಡತುಮಕೂರು ಕೆರೆ ಸೇರಿ ವಿಷವಾಗಿದೆ, ವಿಷಕಾರಿ ನೀರಿನಿಂದ ಸ್ವಾತಂತ್ರ್ಯ ನೀಡುವಂತೆ ಒತ್ತಾಯಿಸಿ ಕೆರೆಯ್ಲೆಲ್ಲೇ ವಿಷ ಅಳಿಸಿ ಕೆರೆ ಉಳಿಸಿ ಸಂದೇಶದ ತೆಪ್ಪ ಬಿಡುವ ಮೂಲಕ ರೈತರು 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಿದರು.
ತಾಲೂಕಿನ ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಚಿಕ್ಕತುಮಕೂರು, ದೊಡ್ಡತುಮಕೂರು ಮತ್ತು ವೀರಾಪುರ ಕೆರೆಗಳ ನೀರು ವಿಷಕಾರಿಯಾಗಿದೆ. ದೊಡ್ಡಬಳ್ಳಾಪುರ ನಗರದ ತ್ಯಾಜ್ಯ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ನೀರು ಶುದ್ಧೀಕರಣವಾಗದೆ ನೇರವಾಗಿ ಕೆರೆಗೆ ಸೇರಿದ ಪರಿಣಾಮ ಕೆರೆಯ ನೀರು ಬಳಸಲು ಸಹ ಯೋಗ್ಯವಲ್ಲದಂತಾಗಿದೆ.
ಕೆರೆಯ ನೀರು ಕುಡಿದು ಜಾನುವಾರುಗಳು ಸಾವನ್ನಪ್ಪಿವೆ, ದೊಡ್ಡತುಮಕೂರು ವ್ಯಾಪ್ತಿಯಲ್ಲಿ 16 ಬೋರ್ವೆಲ್ಗಳ ನೀರನ್ನು ಪರೀಕ್ಷಿಸಿದಾಗ 7 ಬೋರ್ವೆಲ್ಗಳ ನೀರು ವಿಷಕಾರಿಯಾಗಿದೆ ಎಂದು ಲ್ಯಾಬ್ ವರದಿ ಸಹ ಬಂದಿದೆ. ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡಿ ಬಿಡುವಂತೆ ಒತ್ತಾಯಿಸಿ ಕಳೆದ 9 ತಿಂಗಳಿಂದ ದೊಡ್ಡತುಮಕೂರು ಮಜರಾಹೊಸಹಳ್ಳಿ ಕೆರೆ ಸಂರಕ್ಷಣಾ ವೇದಿಕೆಯಿಂದ ಹೋರಾಟ ಮಾಡಲಾಗುತ್ತಿದೆ. ಆದರೆ ಜಿಲ್ಲಾಡಳಿತದಿಂದ ಯಾವುದೇ ಭರವಸೆ ಸಿಗದೆ ಇರುವ ಕಾರಣ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಈ ಮೂಲಕ ಆಚರಿಸಲಾಗಿದೆ ಎಂದು ರೈತರು ಹೇಳಿದರು.