ದೊಡ್ಡಬಳ್ಳಾಪುರ: ಕೊರೊನಾ ಹಿನ್ನೆಲೆ ವಿಶೇಷ ದಿನಗಳಲ್ಲಿ ದೇವಾಲಯ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ, ಡಿಸಿ ಆದೇಶ ಉಲ್ಲಂಘಿಸಿ ನಿನ್ನೆ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಿಎಸ್ವೈ, ಇಂದು ಮಧುರೆ ಶನಿಮಹಾತ್ಮ ದೇವಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಿಎಸ್ವೈ ಭೇಟಿ ಇಂದು ಬೆಳಗ್ಗೆ ಡಿ.ಕೆ ಶಿವಕುಮಾರ್ ಅವರು ಪತ್ನಿ ಜೊತೆ ಶನಿ ಮಹಾತ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ, ಪಕ್ಷದ ಮುಖಂಡರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.
ಮಧುರೆ ಶನಿಮಹಾತ್ಮ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಭಕ್ತರು ಜನದಟ್ಟನೆಯಿಂದ ಕೊರೊನಾ ಮೂರನೇ ಅಲೆ ಹರಡುವ ಸಾಧ್ಯತೆ ಇದ್ದು, ಜಿಲ್ಲಾಧಿಕಾರಿಗಳು ವಿಶೇಷ ದಿನಗಳು ಮತ್ತು ಶ್ರಾವಣ ಮಾಸದ ಶನಿವಾರ ಮತ್ತು ಭಾನುವಾರ ದೇವಸ್ಥಾನದ ಬಾಗಿಲು ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಆದರೆ, ಇಂದು ಶ್ರಾವಣ ಮಾಸದ ವಿಶೇಷ ಶನಿವಾರವಾದ ಹಿನ್ನೆಲೆ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಶನಿಮಹಾತ್ಮ ದೇವಸ್ಥಾನಕ್ಕೆ ಸುತ್ತಮುತ್ತಲಿನ ಭಕ್ತರು ಭೇಟಿ ನೀಡುತ್ತಿದ್ದಾರೆ.
ಇನ್ನು ಸಾರ್ವಜನಿಕರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಲಾಗಿದ್ದು, ಬಾಗಿಲು ಬಂದ್ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರು ದೇವಾಲಯದ ಬಾಗಿಲಿಗೆ ಪೂಜೆ ಮಾಡುತ್ತಿದ್ದಾರೆ. ಸುಮಾರು 300 ಕ್ಕೂ ಹೆಚ್ಚು ಭಕ್ತರು ಜಮಾಯಿಸಿದ್ದು, ಸಾಮಾಜಿಕ ಅಂತರ ಪಾಲಿಸದೆ, ಮಾಸ್ಕ್ ಧರಿಸದೇ ಸರದಿ ಸಾಲಿನಲ್ಲಿ ನಿಂತು ದೇವಾಲಯದ ಬಾಗಿಲಲ್ಲೇ ಪೂಜೆ ಮಾಡುತ್ತಿದ್ದಾರೆ.