ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿರುವ ಘಾಟಿ ಸುಬ್ರಹ್ಮಣ್ಯ ದೇವಾಲಯ ನಾಗದೋಷ ನಿವಾರಣೆಗೆ ಪ್ರಸಿದ್ಧವಾಗಿದೆ. ಈ ದೇವಾಲಯದ ಸ್ಥಳದಲ್ಲಿ ಪ್ರತಿ ವರ್ಷ ದನಗಳ ಅದ್ಧೂರಿ ಜಾತ್ರೆ ನಡೆಯುತ್ತದೆ. ರಾಜ್ಯದ ನಾನಾ ಜಿಲ್ಲೆಗಳ ರೈತರು ಆಗಮಿಸಿ ಎತ್ತುಗಳನ್ನು ಕಟ್ಟಿ, ವ್ಯಾಪಾರ ವಹಿವಾಟು ಮಾಡುತ್ತಿದ್ದರು. ಆದ್ರೆ ಈ ಬಾರಿ ಜಿಲ್ಲಾಡಳಿತ ದನಗಳ ಜಾತ್ರೆಗೆ ಬ್ರೇಕ್ ಹಾಕಿದ್ದು, ಲಕ್ಷಾಂತರ ಬಂಡವಾಳ ಹಾಕಿರುವ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾತ್ರೆ ರದ್ದು:ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಈ ಬಾರಿ ದನಗಳ ಜಾತ್ರೆ ನಡೆಯಬೇಕಿತ್ತು. ಆದ್ರೆ ಜಿಲ್ಲೆಯಲ್ಲಿ ದನ ಕರುಗಳಿಗೆ ಕಾಲು ಬಾಯಿ, ಚರ್ಮಗಂಟು ರೋಗ ಹರಡುವ ಭೀತಿ ಹಿನ್ನೆಲೆ ಜಿಲ್ಲಾಡಳಿತ ಈ ಜಾತ್ರೆಗೆ ಬ್ರೇಕ್ ಹಾಕಿ ರದ್ದು ಮಾಡಿದೆ.
ಇದರಿಂದಾಗಿ ಜಾತ್ರೆಯಲ್ಲಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಸಾಕಿದ್ದ ಎತ್ತುಗಳನ್ನು ಮಾರಾಟಕ್ಕೆ ಮುಂದಾಗಿದ್ದ ರೈತರಿಗೆ ಆಘಾತ ಆಗಿದೆ. ಅಂದಹಾಗೆ ಘಾಟಿ ಸುಬ್ರಹ್ಮಣ್ಯದಲ್ಲಿ ಇದೇ ಡಿಸೆಂಬರ್ 28 ಕ್ಕೆ ಬ್ರಹ್ಮರಥೋತ್ಸವ ನಡೆಯುತ್ತದೆ. ಅದಕ್ಕೂ ಮುಂಚೆ ಕ್ಷೇತ್ರದಲ್ಲಿ ರಾಜ್ಯದ ನಾನಾ ಕಡೆಯಿಂದ ರೈತರು ಆಗಮಿಸಿ ದನಗಳ ಜಾತ್ರೆಯನ್ನು ನಡೆಸುತ್ತಿದ್ದರು. ಜತೆಗೆ ಎತ್ತುಗಳ ವ್ಯಾಪಾರ ವಹಿವಾಟು ನಡೆಸಿ ಕೋಟಿ ಕೋಟಿ ವಹಿವಾಟು ನಡೆಯುತ್ತಿತ್ತು. ಆದ್ರೆ ಇದಕ್ಕೆಲ್ಲಾ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು, ದನಗಳ ಜಾತ್ರೆಗೆ ಬರಬೇಕಿದ್ದ ರೈತರು ಇದೀಗ ಕಂಗಾಲಾಗಿದ್ದಾರೆ.