ದೊಡ್ಡಬಳ್ಳಾಪುರ:ದೇಶದಲ್ಲಿ ಲಾಕ್ಡೌನ್ ಜಾರಿಯಾದ ನಂತರ ನೇಕಾರ ಉದ್ಯಮ ಸಂಪೂರ್ಣವಾಗಿ ಸಂಕಷ್ಟಕ್ಕೆ ಒಳಗಾಗಿದೆ. ನೇಕಾರರ ಕಷ್ಟಕ್ಕೆ ಮಿಡಿದ ಸರ್ಕಾರ, ಅವರಿಂದ ಸೀರೆಗಳನ್ನು ಖರೀದಿಸಲು ಮುಂದಾಗಿದ್ದು, ಆ ಸೀರೆಗಳನ್ನು ಸರ್ಕಾರಿ ನೌಕರರಿಗೆ ಉಚಿತವಾಗಿ ನೀಡಲು ನಿರ್ಧರಿಸಿದೆ.
ಕೊರೊನಾ ಪ್ರೇರಿತ ಲಾಕ್ಡೌನ್ ಆರಂಭವಾದಾಗಿನಿಂದ ಈವರೆಗೂ ರಾಜ್ಯಾದ್ಯಂತ ನೇಯ್ದು 60 ಲಕ್ಷ ಸೀರೆಗಳು ಮಾರಾಟವಾಗದೆ ಮನೆಯಲ್ಲಿ ಉಳಿದಿವೆ. ಏಪ್ರಿಲ್ 1 ರಿಂದ ಜೂನ್ 30ರವರೆಗೆ ನೇಯ್ದು ಸೀರೆಗಳಿಗೆ ಉತ್ತಮ ಮಾರುಕಟ್ಟೆ ಇಲ್ಲದೆ ನೇಕಾರರು ತೊಂದರೆಗೆ ಒಳಗಾಗಿದ್ದರು. ಇದೀಗ ಸರ್ಕಾರವೇ ಸೀರೆಗಳ ಖರೀದಿಸಲು ಮುಂದಾಗಿದ್ದು, ನೇಕಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ವಿದ್ಯುತ್ ಮತ್ತು ಕೈ ಮಗ್ಗ ನೇಕಾರರು ವಿವಿಧ ಬಗೆಯ ಸೀರೆಗಳನ್ನು ನೇಯ್ದಿದ್ದಾರೆ. ರೇಷ್ಮೆ, ಪಾಲಿಸ್ಟರ್, ಕಾಟನ್...ಹೀಗೆ ನಾನಾ ಬಗೆಯ ಸೀರೆಗಳಿಗೆ ಜವಳಿ ಇಲಾಖೆ 7 ವಿಭಾಗಗಳನ್ನಾಗಿ ಮಾಡಿ ಕನಿಷ್ಠ ₹ 700 ರಿಂದ ₹ 1350 ದರ ನಿಗದಿಪಡಿಸಿದೆ. ಹೆಚ್ಚು ದಾಸ್ತಾನು ಮಾಡಿರುವ ನೇಕಾರರು ಜವಳಿ ಇಲಾಖೆಯ ಅರ್ಜಿ ಮುಖಾಂತರ ಜು.15ರೊಳಗೆ ನೋಂದಣಿ ಮಾಡಿಕೊಂಡಿದ್ದಾರೆ.
ಸರ್ಕಾರಿ ನೌಕರರಿಗೆ ಉಚಿತ ಸೀರೆ ವಿತರಣೆ ಸರ್ಕಾರ ನೇಕಾರರಿಂದ ಖರೀದಿಸಿದ ಸೀರೆಗಳನ್ನು ಕೊರೊನಾ ವಿರುದ್ಧ ಹೋರಾಡುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೇರಿ ಇನ್ನಿತರ ಮಹಿಳಾ ಕೊರೊನಾ ವಾರಿಯರ್ಸ್ಗೆ ಉಚಿತವಾಗಿ ನೀಡುವ ಉದ್ದೇಶ ಹೊಂದಿದೆ. ಹಾಗೆಯೇ, ಸರ್ಕಾರಿ ನೌಕಕರಿಗೆ ಎರಡು ಸೀರೆಗಳನ್ನು ನೀಡುವ ತೀರ್ಮಾನಕ್ಕೆ ಸರ್ಕಾರ ಮುಂದಾಗಿದೆ. ಸರ್ಕಾರದ ಈ ಕ್ರಮ ನೇಕಾರರ ಸಂತಸಕ್ಕೆ ಕಾರಣವಾಗಿದೆ.