ಸಿಎಂ ಗೃಹ ಕಚೇರಿಯಲ್ಲಿ ಕಾಣಿಸಿಕೊಂಡ ಅನರ್ಹ ಶಾಸಕ ಬಿ.ಸಿ ಪಾಟೀಲ್ - ಸಿಎಂ ಬಿ.ಎಸ್.ಯಡಿಯೂರಪ್ಪ
ಸುಪ್ರೀಂಕೋರ್ಟ್ ತೀರ್ಪಿನ ನಂತರ ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ತಿಳಿಸುವುದಾಗಿ ಹೇಳಿದ್ದ ಅನರ್ಹ ಶಾಸಕ ಬಿ.ಸಿ ಪಾಟೀಲ್ ಅವರು ಶನಿವಾರ ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
ಅನರ್ಹ ಶಾಸಕ ಬಿ.ಸಿ ಪಾಟೀಲ್
ಬೆಂಗಳೂರು:ಶಾಸಕ ಸ್ಥಾನದಿಂದ ಅನರ್ಹತೆಗೊಳಿಸಿರುವ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ನಂತರ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಕಾಣಿಸಿಕೊಂಡುವ ಅಚ್ಚರಿ ಮೂಡಿಸಿರುವ ಅವರು ಮುಂಬೈನಿಂದ ವಾಪಸಾದ ಬಳಿಕ ಸ್ವ ಕ್ಷೇತ್ರ ಹಿರೇಕೆರೂರಿಗೆ ಭೇಟಿ ನೀಡಿದ್ದರು. ಇದೀಗ ರಾಜಧಾನಿಗೆ ಆಗಮಿಸಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರರನ್ನು ಭೇಟಿ ಮಾಡಿದರು.
ಕಾಂಗ್ರೆಸ್ನಿಂದ ನಮ್ಮನ್ನು ಉಚ್ಛಾಟಿಸಲಾಗಿದೆ. ಹಾಗಾಗಿ ಕಾಂಗ್ರೆಸ್ನಲ್ಲಿಲ್ಲ. ಅನರ್ಹರು ಯಾರೂ ಕೂಡ ಕಾಂಗ್ರೆಸ್ನವರಲ್ಲ ಹಾಗೂ ಶಾಸಕ ಸ್ಥಾನ ಕಳೆದುಕೊಂಡಿದ್ದೇವೆ ಎಂದುಕೊಂಡಿಲ್ಲ. ಸುಪ್ರೀಂಕೋರ್ಟ್ನಲ್ಲಿ ಅನರ್ಹತೆ ತೀರ್ಪು ಪ್ರಶ್ನಿಸಿದ್ದೇವೆ. ಮುಂದಿನ ವಾರ ಅರ್ಜಿ ವಿಚಾರಣೆಗೆ ಬರಬಹುದು. ಅಯೋಧ್ಯೆ ಕುರಿತ ಅರ್ಜಿಗಳ ವಿಚಾರಣೆ ಮಾಡುತ್ತಿರುವುದರಿಂದ ನಮ್ಮ ಅರ್ಜಿ ವಿಚಾರಣೆ ವಿಳಂಬವಾಗಿದೆ ಎಂದರು.
ರಾಜ್ಯ ಸಚಿವ ಸಂಪುಟ ರಚನೆ ವಿಳಂಬಕ್ಕೆ ನಾವು ಕಾರಣರಲ್ಲ. ಅನರ್ಹ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಕೊಡಬೇಕು ಎನ್ನುವ ಕಾರಣಕ್ಕೆ ವಿಳಂಬವಾಗುತ್ತಿದೆ ಎನ್ನುವುದು ಸರಿಯಲ್ಲ. ವಿಳಂಬಕ್ಕೆ ಕಾರಣವನ್ನು ಮುಖ್ಯಮಂತ್ರಿಗಳನ್ನೇ ಕೇಳಿ ಎಂದರು.