ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಿರುವ ವಿಮಾನ ನಿಲ್ದಾಣ. ಆದರೆ, ವಿಮಾನ ನಿಲ್ದಾಣ ಆಡಳಿತ ಮಂಡಳಿ ವಿರುದ್ದ ಕೆಲ ಕಾರು ಚಾಲಕರು ಇದೀಗ ಸಿಡಿದೆದ್ದಿದ್ದಾರೆ. ಏರ್ಪೋರ್ಟ್ನಲ್ಲಿ ಕೆಎಸ್ಡಿಸಿ ಕಾರು ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಅಂದಹಾಗೆ ದೇಶ ವಿದೇಶದಿಂದ ಪ್ರತಿ ನಿತ್ಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಕ್ಷಾಂತರ ಪ್ರಯಾಣಿಕರು ಆಗಮಿಸುತ್ತಾರೆ.
ಹಾಗಾಗಿ ಇವರಿಗೆ ಸಾರಿಗೆ ಸೌಲಭ್ಯ ಕಲ್ಪಿಸಲು ಆಡಳಿತ ಮಂಡಳಿ ರಾಜ್ಯ ಸರಕಾರದ ಅಧೀನದಲ್ಲಿ ಇರುವ ಕೆಎಸ್ಡಿಸಿ ಕಾರುಗಳನ್ನು ಬುಕ್ ಮಾಡಿಕೊಂಡಿದೆ. ಆದರೆ, ಕೊರೋನಾ ಬರುವ ಮೊದಲು ಏರ್ಪೋರ್ಟ್ ಅರೈವಲ್ ಬಳಿ 150 ಕಾರುಗಳು ನಿಂತು ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅವಕಾಶವಿತ್ತು. ಆದರೆ, ಈಗ ಬರೀ 5 ರಿಂದ 30 ಕಾರುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಈ ಕಾರುಗಳಿಗೆ ಪ್ರಯಾಣಿಕರು ಬಂದು ಹೋಗುವವರೆಗೂ ಮತ್ತೆ ಯಾವುದೇ ಕಾರುಗಳಿಗೆ ಅವಕಾಶ ಇಲ್ಲ. ಏರ್ಪೋರ್ಟ್ನ ಭದ್ರತೆಯ ನೆಪ ಹೇಳಿ ಹೆಚ್ಚು ಕಾರುಗಳು ಪಾರ್ಕಿಂಗ್ ಮಾಡಲು ಏರ್ಪೋರ್ಟ್ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಹಾಗಾಗಿ ದಿನವೆಲ್ಲಾ ಕಾದರೂ ಒಂದೇ ಒಂದು ಬಾರಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಆಗುತ್ತಿಲ್ಲ ಎಂದು ಏರ್ಪೋಟ್ ಚಾಲಕರ ಸಂಘದ ಕಾರ್ಯದರ್ಶಿ ಧರ್ಮೇಂದ್ರ ಅಸಮಾಧಾನ ತೋಡಿಕೊಂಡಿದ್ದಾರೆ.
ಇನ್ನೂ ಏರ್ಪೋರ್ಟ್ಗೆ ಬರುವ ಪ್ರಯಾಣಿಕರನ್ನು ಏರ್ಪೋರ್ಟ್ ಸಿಬ್ಬಂದಿ ಖಾಸಗಿ ಕಂಪನಿಗಳಾದ ಓಲಾ ಮತ್ತು ಊಬರ್ಗೆ ಹೋಗುವಂತೆ ಸೂಚನೆ ನೀಡುತ್ತಿದ್ದರಂತೆ. ಒಂದು ಬಾರಿ ಏರ್ಪೋರ್ಟ್ ನಿಂದ ಬೆಂಗಳೂರಿಗೆ ಹೋಗಲು ಖಾಸಗಿ ಕಂಪನಿಯ ಟ್ಯಾಕ್ಸಿಗಳಲ್ಲಿ 2 ಸಾವಿರ ರೂ ದರ ವಿಧಿಸುತ್ತಾರಂತೆ. ಆದರೆ, ಡ್ರೈವರ್ಗೆ ಸಿಗುವುದು ಬರೀ 800 ರಿಂದ 1 ಸಾವಿರ ಅಷ್ಟೇ. ಉಳಿದಿದ್ದೆಲ್ಲಾ ಹಣ ಖಾಸಗಿ ಕಂಪನಿ ಪಾಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.