ಆನೇಕಲ್ (ಬೆಂಗಳೂರು ಗ್ರಾಮಾಂತರ) :ಭಾರತದ ಅತೀ ದೊಡ್ಡ ಚಿಟ್ಟೆ ಸದರ್ನ್ ಬರ್ಡ್ ವಿಂಗ್ ಚಿಟ್ಟೆಯನ್ನು ರಾಜ್ಯ ಚಿಟ್ಟೆಯೆಂದು ಘೋಷಣೆ ಮಾಡಲಾಗಿದೆ. ಈ ಚಿಟ್ಟೆ ತಳಿಯನ್ನ ಕನ್ನಡ ರಾಜ್ಯೋತ್ಸವದಂದು ಬಿಡುಗಡೆ ಮಾಡಲಾಗಿತ್ತು. ಇದೀಗ ಹೆಚ್ಚಿನ ಒತ್ತು ನೀಡಿ ಚಿಟ್ಟೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 'ಸದರ್ನ್ ಬರ್ಡ್ ವಿಂಗ್' ಚಿಟ್ಟೆ ಅಭಿವೃದ್ಧಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಚಿಟ್ಟೆ ತಜ್ಞ ಲೋಕನಾಥ್ ಹಾಗೂ ಕಾರ್ಯಪಾಲಕ ನಿರ್ದೇಶಕಿ ವನಶ್ರೀ ಚಿಟ್ಟೆಯ ತಳಿಯನ್ನು ಸಂರಕ್ಷಿಸಿ ಬಿಡುಗಡೆಗೊಳಿಸಿದ್ದಾರೆ. ಚಿಟ್ಟೆ ವನದ ಚಿಟ್ಟೆ ಅಭಿವೃದ್ದಿ ಕೇಂದ್ರದಲ್ಲಿ ಸದರ್ನ್ ಬರ್ಡ್ ವಿಂಗ್ ತಳಿ ಅಭಿವೃದ್ದಿಗೆ ಬೇಕಾದ ಸೌಲತ್ತುಗಳನ್ನು ಒದಗಿಸಿ ರಾಜ್ಯ ಚಿಟ್ಟೆ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿದೆ.
ಭಾರತದ ಅತೀ ದೊಡ್ಡ ಚಿಟ್ಟೆ ಇದಾಗಿದ್ದು, ಕರ್ನಾಟಕದ ಪಶ್ಚಿಮ ಘಟ್ಟದ ದಟ್ಟಕಾಡು ಹಾಗೂ ಕರಾವಳಿ, ಬಯಲು ಪ್ರದೇಶಗಳಲ್ಲಿ ಹೆಚ್ಚು ಕಾಣಸಿಗುತ್ತದೆ. ದೇಶದಲ್ಲಿಯೇ ಮೊದಲು ಮಹಾರಾಷ್ಟ್ರವು ‘ಬ್ಲೂ ಮೊರ್ಮನ್’ ಚಿಟ್ಟೆಯನ್ನು ರಾಜ್ಯ ಚಿಟ್ಟೆಯಾಗಿ ಘೋಷಿಸಿತ್ತು. ಎರಡನೆಯದಾಗಿ ಕರ್ನಾಟಕದಲ್ಲಿ ಸದರ್ನ್ ಬರ್ಡ್ ವಿಂಗ್ ಚಿಟ್ಟೆಯನ್ನು ರಾಜ್ಯ ಚಿಟ್ಟೆಯಾಗಿ ಘೋಷಿಸಲಾಗಿದೆ.
2016ರ ಆಗಸ್ಟ್‌ನಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಈ ‘ಸದರ್ನ್ ಬರ್ಡ್‌ವಿಂಗ್’ ಚಿಟ್ಟೆಯನ್ನು ರಾಜ್ಯ ಚಿಟ್ಟೆಯಾಗಿ ಘೋಷಣೆ ಮಾಡಿ ರಾಜ್ಯಪಾಲರ ಆದೇಶದ ರೂಪದಲ್ಲಿ ಅಧಿಕೃತ ಮುದ್ರೆ ಒತ್ತಲಾಗಿತ್ತು.
ರೆಕ್ಕೆ ಮುಚ್ಚಿದಾಗ ಕಾಣುವ ಕೆಂಪು ಚುಕ್ಕೆಗಳು ಎದೆಭಾಗದಲ್ಲಿ ಕಂಡು ಬರುವ ಕಪ್ಪು ರಂಗಿನ ನಡುವೆ ಹಳದಿ ಬಣ್ಣ ಅಗಲದ ರೆಕ್ಕೆಗಳೊಂದಿಗೆ ಕನ್ನಡದ ಬಾವುಟ ಹಾರಿದಂತೆ ಕಂಡು ಬರುವ ಈ ಚಿಟ್ಟೆ ಸಾಧಾರಣವಾಗಿ 140-150 ಮಿ.ಮೀ. ಅಗಲವಿರುತ್ತದೆ. 160 ಮಿ.ಮೀ. ಅಗಲ ಬೆಳೆದ ದಾಖಲೆಯೂ ಇದೆ. ಹೀಗಾಗಿ ಇದನ್ನು ಬರ್ಡ್ ವಿಂಗ್ ಚಿಟ್ಟೆ ಎಂದು ಕರೆಯಲಾಗುತ್ತದೆ.