ಬೆಂಗಳೂರು:ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ.
ಈ ಹಿಂದೆ ಸಚಿವರಾಗಿದ್ದ ಶಶಿಕಲಾ ಜೊಲ್ಲೆಯವರು ಇದೇ ಇಲಾಖೆಯಲ್ಲಿ ಮೊಟ್ಟೆ ಖರೀದಿಗೆ ಸಂಬಂಧಿಸಿ ಅಕ್ರಮ ನಡೆಸಿರುವುದು ವಿಡಿಯೋದಲ್ಲಿ ದಾಖಲಾಗಿದ್ದರೂ ಅವರನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳಲಾಗಿದೆ. ಹಾಲಿ ಸಚಿವರಾದ ಹಾಲಪ್ಪ ಆಚಾರ್ ಅಧಿಕಾರ ವಹಿಸಿಕೊಂಡು ಒಂದೂವರೆ ವರ್ಷವಾದರೂ ಮಹಿಳೆಯರು ಹಾಗೂ ಮಕ್ಕಳಿಗೆ ನೆರವಾಗುವಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮವಾಗಿ ತಾಯಂದಿರು, ಮಕ್ಕಳ ಮರಣ ಪ್ರಮಾಣ ಏರಿಕೆಯಾಗುತ್ತಿದೆ ಎಂದು ಕುಶಲಸ್ವಾಮಿ ಹರಿಹಾಯ್ದರು.
ಆರೋಪದ ಹಿನ್ನೆಲೆ:ಮಾತೃಪೂರ್ಣ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದ್ದು, ಯೋಜನೆಯಡಿ ಪೂರೈಸಬೇಕಾದ ಆಹಾರವು ಭ್ರಷ್ಟರ ಪಾಲಾಗುತ್ತಿದೆ. ತೀವ್ರವಾದ ಅಪೌಷ್ಟಿಕತೆ ಹಾಗೂ ಕಲುಷಿತ ಆಹಾರ ಸೇವನೆಯಿಂದ ಬಾಣಂತಿಯರು ಹಾಗೂ ಮಕ್ಕಳು ಬಳಲುತ್ತಿದ್ದರೂ ಸಚಿವ ಹಾಲಪ್ಪ ಆಚಾರ್ ಜಾಣಕುರುಡು ತೋರುತ್ತಿದ್ದಾರೆ.
ಕೇವಲ ಧಾರವಾಡ ಜಿಲ್ಲೆಯ ಆಸ್ಪತ್ರೆಗಳಲ್ಲೇ 2019-20ರಲ್ಲಿ 60, 2020-21ರಲ್ಲಿ 69, 2021-22ರಲ್ಲಿ 71 ಹಾಗೂ 2022-23ರಲ್ಲಿ ಸೆಪ್ಟೆಂಬರ್ ತನಕ 41 ತಾಯಂದಿರು ಮೃತಪಟ್ಟಿದ್ದಾರೆ. ಇನ್ನು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಲ್ಲಿನ ಶಿಶು ಮರಣ ಪ್ರಮಾಣ ನೋಡುವುದಾದರೆ, 2019-20ರಲ್ಲಿ 504, 2020-21ರಲ್ಲಿ 454, 2021-22ರಲ್ಲಿ 327 ಹಾಗೂ 2022-23ರಲ್ಲಿ ಸೆಪ್ಟೆಂಬರ್ ತನಕ 206 ಹಸುಗೂಸುಗಳು ಮೃತಪಟ್ಟಿವೆ ಎಂದು ಮಾಹಿತಿ ನೀಡಿದರು.