ದೊಡ್ಡಬಳ್ಳಾಪುರ:ತಾಲೂಕಿನ ಕಸಬಾ ಹೋಬಳಿ ಕೋಳೂರಿನಲ್ಲಿ ಕೃಷಿ ಹೊಂಡಕ್ಕೆ ತಾಯಿ-ಮಗ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಭಾನುವಾರ ನಡೆದಿದೆ. ಮೃತರನ್ನು ಕೋಳೂರು ನಿವಾಸಿಗಳಾದ ರೂಪ (35), ಹೇಮಂತ್ (9) ಎಂದು ಗುರುತಿಸಲಾಗಿದೆ. ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೋಳೂರಿನ ಕೃಷಿ ಹೊಂಡದ ಬಳಿ ಜಾನುವಾರು ಮೇಯಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.
9 ವರ್ಷದ ಹೇಮಂತ್ ಕೃಷಿ ಹೊಂಡದ ಬಳಿ ಆಟವಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆ. ಮಗನನ್ನು ರಕ್ಷಿಸಲು ಹೋದ ತಾಯಿ ಕೂಡ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಸ್ಥಳೀಯರು ಮೃತದೇಹಗಳನ್ನು ಹೊರತೆಗೆದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಸದ ಗುಂಡಿಗೆ ಬಿದ್ದು ನಾಲ್ಕು ವರ್ಷದ ಮಗು ಸಾವು :ಆಟವಾಡುವ ಸಂದರ್ಭದಲ್ಲಿ ಕಸದ ಗುಂಡಿಗೆ ಬಿದ್ದು ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ಫೆ.10 ರಂದು ನಡೆದಿದೆ. ಪೆರುಂಬವೂರ್ನ ಕುಟ್ಟಿಪದಂನಲ್ಲಿರುವ ಹುನೂಬಾ ಪ್ಲೈವುಡ್ ಕಂಪನಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಬಾಲಕಿಯನ್ನು ಅಜ್ಮಿನಿ ಎಂದು ಗುರುತಿಸಲಾಗಿದೆ.
ಮೃತ ಬಾಲಕಿಯ ತಾಯಿ ಪ್ಲೈವುಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರು ಇಲ್ಲವೆಂದು ತಾಯಿಯು ಮಗುವನ್ನು ಕಂಪನಿಗೆ ಕರೆದುಕೊಂಡು ಹೋಗಿದ್ದರು ಎಂದು ತಿಳಿದು ಬಂದಿದೆ. ತಾಯಿ ಕೆಲಸದಲ್ಲಿ ನಿರತರಾಗಿದ್ದಾಗ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಕಸದ ಗುಂಡಿಗೆ ಬಿದ್ದು ಸಾವನ್ನಪ್ಪಿದೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ಲೈವುಡ್ ಕಂಪನಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.