ಕರ್ನಾಟಕ

karnataka

ETV Bharat / state

ನೆಲಮಂಗಲ: ಟ್ರಾಕ್ಟರ್​ನಲ್ಲಿ ಹೊಲ ಉಳುಮೆ ಮಾಡುವಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ - etv bharat karnataka

ಟ್ರಾಕ್ಟರ್​ನಲ್ಲಿ ಹೊಲ ಉಳುಮೆ ಮಾಡುವಾಗ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

Etv Bharatdead-body-found-in-agriculture-field-while-ploughing-the-tractor
ನೆಲಮಂಗಲ: ಟ್ರಾಕ್ಟರ್​ನಲ್ಲಿ ಉಳುಮೆ ಮಾಡುವಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

By ETV Bharat Karnataka Team

Published : Oct 30, 2023, 4:03 PM IST

Updated : Oct 30, 2023, 4:39 PM IST

ನೆಲಮಂಗಲ (ಬೆಂಗಳೂರು): ಟ್ರ್ಯಾಕ್ಟರ್ ಮೂಲಕ ಹೊಲ ಉಳುಮೆ ಮಾಡುವಾಗ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ನೆಲಮಂಗಲ ತಾಲೂಕಿನ ಮಂಟನಕುರ್ಚಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಅನುಸೂಯಮ್ಮ ಎಂಬುವರ ತೋಟದಲ್ಲಿ ಚಾಲಕ ಹರೀಶ್ ಎಂಬುವರು ಟ್ರ್ಯಾಕ್ಟರ್​ನಲ್ಲಿ ಉಳುಮೆ ಮಾಡುವಾಗ ಶವ ಸಿಕ್ಕಿದೆ.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಸ್ಥಳ ಪರಿಶೀಲನೆ ತಂಡ ಭೇಟಿ ನೀಡಿದೆ. ಶವ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದ್ದು, ಗುರುತಿಸಲು ಕಷ್ಟಕರವಾಗಿದೆ. ಸುಮಾರು 45 ರಿಂದ 50 ವರ್ಷದ ವ್ಯಕ್ತಿಯ ಶವವಾಗಿದ್ದು, ಮೂರ್ನಾಲ್ಕು ದಿನಗಳ ಹಿಂದೆಯೇ ಸಾವನ್ನಪ್ಪಿರಬಹುದು ಅಥವಾ ಕೊಲೆ ಮಾಡಿ ಮೃತದೇಹವನ್ನು ಇಲ್ಲಿ ಎಸೆದು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್​ ರಾಜೀವ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿದ್ದಾರೆ.

ಪೊಲೀಸರು ಅನುಮಾನಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕುರಿಗಾಹಿಯ ಮಗ ನಾಗರಾಜು ಪ್ರತಿಕ್ರಿಯೆ

ಪ್ರತ್ಯೇಕ ಪ್ರಕರಣ- ಟಿಪ್ಪರ್ ಲಾರಿ ಹರಿದು 13 ಕುರಿಗಳು ಸಾವು (ಆನೇಕಲ್​):ತಮಿಳುನಾಡಿನಿಂದ ಆನೇಕಲ್​ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ಹರಿದು 13 ಕುರಿಗಳು ಅಸುನೀಗಿರುವ ಘಟನೆ ಚೂಡೇನಹಳ್ಳಿ ಬಳಿ ನಡೆದಿದೆ. ಇಂದು ಬೆಳಗ್ಗೆ ಕುರಿಗಾಹಿ ಮೀಸೆ ತಿಮ್ಮಣ್ಣ, ಕುರಿಗಳನ್ನು ರಸ್ತೆ ದಾಟಿಸುವಾಗ ಘಟನೆ ನಡೆದಿದೆ. ಕೂಡಲೇ ಚಾಲಕ ಟಿಪ್ಪರ್ ನಿಲ್ಲಿಸಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಟಿಪ್ಪರ್​ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕುರಿಗಾಹಿ ಮೀಸೆ ತಿಮ್ಮಣ್ಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಟಿಪ್ಪರ್ ಲಾರಿ ಹರಿದು 13 ಕುರಿಗಳು ಸಾವು

ಈ ಕುರಿತು ಕುರಿಗಾಹಿ ಮಗ ನಾಗರಾಜು ಮಾತನಾಡಿ, "ನನ್ನ ತಂದೆ - ತಾಯಿ ಬೆಳಗ್ಗೆ ಕುರಿಗಳನ್ನು ಹೊಡೆದುಕೊಂಡು ಹೋಗುವಾಗ ತಳಿ ರಸ್ತೆಯಿಂದ ಮೊಬೈಲ್​ನಲ್ಲಿ ಮಾತನಾಡಿಕೊಂಡು ಬರುತ್ತಿದ್ದ ಟಿಪ್ಪರ್ ​ಲಾರಿ ಚಾಲಕ ಹಾರ್ನ್​ ಮಾಡಿದ್ದಾನೆ. ಇದರಿಂದ ಚದುರಿದ 10 ದೊಡ್ಡ ಮತ್ತು ಮೂರು ಮರಿ ಕುರಿಗಳು ಲಾರಿಗೆ ಸಿಲುಕಿ ಮೃತಪಟ್ಟಿವೆ. ಲಾರಿ ಮಾಲೀಕನಿಗೆ ಕರೆ ಮಾಡಿದರೆ ಬರುತ್ತೇನೆ ಎಂದು ಹೇಳಿ ಇನ್ನೂ ಬಂದಿಲ್ಲ. ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದೇವೆ. ಮೃತಪಟ್ಟ ಕುರಿಗಳ ಮೌಲ್ಯ ಎರಡೂವರೆ ಲಕ್ಷ ರೂಪಾಯಿ ಆಗಿದೆ" ಎಂದು ಹೇಳಿದರು.

ಇತ್ತೀಚೆಗೆ ತಳಿ ರಸ್ತೆ ಕಾಮಗಾರಿ ಮುಗಿದಿರುವುದರಿಂದ ವಾಹನಗಳನ್ನು ವೇಗವಾಗಿ ಚಾಲನೆ ಮಾಡಲಾಗುತ್ತಿದೆ ಮತ್ತು ರಸ್ತೆಗೆ ಸ್ಪೀಡ್ ಬ್ರೇಕರ್ಸ್ ಹಾಕದಿರುವುದರಿಂದ ಅಪಘಾತ ಸಂಭವಿಸಿ ಇಲ್ಲಿಯವರೆಗೆ ಮೂರ್ನಾಲ್ಕು ಜನ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ:ಆನೇಕಲ್: ನಿವೇಶನ ವಿವಾದ ಹಿನ್ನೆಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿ ಹತ್ಯೆ

Last Updated : Oct 30, 2023, 4:39 PM IST

ABOUT THE AUTHOR

...view details