ನೆಲಮಂಗಲ:ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ ಸದಾನಂದಗೌಡ ಮಾರಮ್ಮ ದೇವಿಗೆ 11 ರೂಪಾಯಿ ಹರಕೆ ತಿರಿಸಿದರು. ಈ ವೇಳೆ ಹಿಂದಿ ವಿಚಾರವಾಗಿ ಕೇಂದ್ರ ಸರ್ಕಾರದ ಧೋರಣೆಯನ್ನು ಅವರು ಸಮರ್ಥಿಸಿಕೊಂಡರು.
ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಡಿ ವಿ ಸದಾನಂದಗೌಡ ಇಲ್ಲಿನ ತಾವರೆಕೆರೆಯ ದೇಗುಲದಲ್ಲಿ ಗೆಲ್ಲಿಸುವಂತೆ ಹರಕೆ ಕಟ್ಟಿಕೊಂಡಿದ್ದರು. ಅದರಂತೆಯೇ ಇಂದು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಾಯಿಯ ಆಶೀರ್ವಾದ ಪಡೆದು, 11 ರೂಪಾಯಿ ಹಣವನ್ನು ಕಟ್ಟಿ ತಮ್ಮನ್ನು ಗೆಲ್ಲಿಸುವಂತೆ ಮಾಡಿಕೊಂಡಿದ್ದ ಹರಕೆಯನ್ನು ತೀರಿಸಿದರು.
ಬಳಿಕ ಮಾತನಾಡಿ, ನಾವು ದೇವರನ್ನು ನಂಬುವವರು. ಗಾಳಿಯಲ್ಲಿ ಅವ್ಯಕ್ತವಾದ ಶಕ್ತಿ ಇದೆ. ಅದುವೇ ದೇವರೆಂದು ನಂಬುವ ವ್ಯಕ್ತಿ ನಾನು. ಚುನಾವಣೆಗೆ ಮುನ್ನಾ ದೇವಿಯ ಆಶೀರ್ವಾದ ಪಡೆದು ಚುನಾವಣೆಗೆ ಹೋದೆ. ಇಂದು ಗೆಲುವು ಸಿಕ್ಕಿದೆ. ನೀನು ಗೆಲ್ಲಿಸಿ ಕೊಟ್ಟಿದ್ದಿಯಾ, ಕೆಲಸ ಮಾಡಲು ಶಕ್ತಿ ಕೊಡು ಎಂದು ಪ್ರಾರ್ಥಿಸಲು ದೇವಿ ದರ್ಶನಕ್ಕೆ ಬಂದಿರುವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಅದಾಗಿಯೇ ಬೀಳುತ್ತದೆ. ಕೇಂದ್ರದಲ್ಲಿ ಬಿಜೆಪಿಯ ಬಿರುಗಾಳಿ ಬೀಸಿದೆ. ಬೀರುಗಾಳಿಯ ಎಫೆಕ್ಟ್ ರಾಜ್ಯದಲ್ಲಿಯೂ ಬೀಸಿ ಸರ್ಕಾರ ಕುಸಿತ ಕಾಣುತ್ತದೆ ಬಳಿಕ ಬಿಜೆಪಿ ಏನು ಮಾಡಬೇಕು ಅದನ್ನು ಮಾಡುತ್ತದೆ ಎಂದು ಪರೋಕ್ಷವಾಗಿ ಸರ್ಕಾರ ಪತನದ ಬಗ್ಗೆ ಭವಿಷ್ಯ ನುಡಿದರು.
ಹಿಂದಿ ಹೇರಿಕೆ ಬಗ್ಗೆ ಕೇಂದ್ರ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ ಡಿವಿಎಸ್, ಭಾರತ ದಿನೇ ದಿನೇ ಬೆಳೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಸಾಧನೆ ಮಾಡಬೇಕಾದರೆ ಕೆಲವು ಬದಲಾವಣೆ ಅನಿವಾರ್ಯ ಎಂದ ಅವರು, ಕಾವೇರಿ, ಮಹದಾಯಿ ಸೇರಿ ರಾಜ್ಯದ ಎಲ್ಲಾ ವಿಚಾರದ ಬಗ್ಗೆ ಕೇಂದ್ರದಲ್ಲಿ ಗಮನಹರಿಸುವೆ ಎಂದರು.