ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸುರಿದ ಅಕಾಲಿಕ ಮಳೆ, ಗಾಳಿಯಿಂದ 30.03 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದ ಬೆಳೆಗಳು ನಾಶವಾಗಿವೆ. ಮುಂಗಾರು ಮಳೆ ಆರಂಭದ ಹಿನ್ನೆಲೆ ವಿಪತ್ತು ಸನ್ನದ್ಧತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್ ಲತಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಮುಂಗಾರು ಮಳೆ ವಿಪತ್ತು ಸನ್ನದ್ಧತೆ ಕ್ರಮ ಕೈಗೊಳ್ಳುವ ಕುರಿತಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 1.31 ಹೆಕ್ಟೇರ್ ಹಾಗೂ ಹೊಸಕೋಟೆ ತಾಲೂಕಿನಲ್ಲಿ 5.62 ಹೆಕ್ಟೇರ್ ಸೇರಿದಂತೆ ಒಟ್ಟು 6.93 ಹೆಕ್ಟೇರ್ ರಷ್ಟು ವಿರ್ಸೀರ್ಣದ ಕೃಷಿ ಬೆಳೆ ಸ್ವೀಟ್ ಕಾರ್ನ್ (ಸಿಹಿ ಮೆಕ್ಕೆಜೋಳ) ಬೆಳೆಗೆ ಹಾನಿಯಾಗಿದೆ. ತೋಟಗಾರಿಕೆ ಬೆಳೆ ಮಾವು 11.70 ಹೆಕ್ಟೇರ್, ಟೊಮೆಟೋ 2 ಹೆಕ್ಟೇರ್, ಸೇವಂತಿಗೆ 5 ಹೆಕ್ಟೇರ್, ಬದನೆಕಾಯಿ 1.2 ಹೆಕ್ಟೇರ್, ಹೀರೆ ಬಳ್ಳಿ 1.28 ಹೆಕ್ಟೇರ್, ಬೀನ್ಸ್ 1.00 ಹೆಕ್ಟೇರ್ ವಿರ್ಸೀರ್ಣದ ಬೆಳೆಯು ಹಾನಿಯಾಗಿದೆ. ಉಳಿದಂತೆ ಎಲೆಕೋಸು, ಹೂಕೋಸು, ಚೆಂಡು ಹೂಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ಒಟ್ಟಾರೆ ಹೊಸಕೋಟೆ ತಾಲ್ಲೂಕಿನಲ್ಲಿ 17 ಹೆಕ್ಟೇರ್ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 6.10 ಹೆಕ್ಟೇರ್ ಒಟ್ಟು 23.10 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಸಭೆಗೆ ತಿಳಿಸಿದರು. ಅಕಾಲಿಕ ಮಳೆ, ಗಾಳಿಯಿಂದ 30.03 ಹೆಕ್ಟೇರ್ ವಿಸ್ತೀರ್ಣದ ಕೃಷಿ ಬೆಳೆ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿದೆ. ಶೀಘ್ರವೇ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.