ಬೆಂಗಳೂರು ಗ್ರಾಮಾಂತರ ಎಎಸ್ಪಿ ಪುರುಷೋತ್ತಮ್ ಆನೇಕಲ್:ಇತ್ತೀಚೆಗೆ ಆನೇಕಲ್ ಉಪ ವಿಭಾಗದಲ್ಲಿ ಸದ್ದು ಮಾಡುತ್ತಿರುವ ಅಪರಾಧ ಪ್ರಕರಣಗಳ ಆರೋಪಿಗಳ ಸದ್ದಡಗಿಸಲು ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ 49 ರೌಡಿಗಳನ್ನ ಕರೆಸಿ ಬೆಂಗಳೂರು ಗ್ರಾಮಾಂತರ ಎಎಸ್ಪಿ ಪುರುಷೋತ್ತಮ್ ಖಡಕ್ ಎಚ್ಚರಿಕೆ ನೀಡಿದರು.
ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುದ್ದಿಯಲ್ಲಿದ್ದ ಸಕ್ರಿಯ ತಂಡ, ಹಾಡಹಗಲೇ ರಸ್ತೆಯಲ್ಲಿ ಬೈಕ್ನಲ್ಲಿ ಬಂದು ಲಾಂಗ್ ಬೀಸಿ ಕೇಕೆ ಹಾಕಿದ್ದು ಆನೇಕಲ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.
ಅತ್ತಿಬೆಲೆ ಪೊಲೀಸ್ ಠಾಣೆ ಪರಿದಿಯ ತಿಮ್ಮಸಂದ್ರದಲ್ಲಿ ನಕಲಿ ಪಿಸ್ತೂಲ್ ಸದ್ದು, ಯುವ ತಂಡದ ಉಪಟಳ, ಹೀಗೆ ಹತ್ತು ಹಲವು ಖಾಸಗಿ ಜಮೀನುಗಳ ವ್ಯಾಜ್ಯಗಳಲ್ಲಿ ರೌಡಿಗಳ ಪಾಲ್ಗೊಳ್ಳುವಿಕೆ ಅತಿಯಾಗಿತ್ತು. ಒಟ್ಟು 102 ಜನ ರೌಡಿಗಳಲ್ಲಿ 49 ಮಂದಿ ಹಾಜರಿದ್ದು, ಉಳಿದವರು ಇತರೆ ಭಾಗದವರಾಗಿದ್ದಾರೆ. ಕೆಲ ರೌಡಿಗಳು ಜೈಲಿನಲ್ಲಿದ್ದಾರೆ ಎಂದು ಇನ್ಸ್ಪೆಕ್ಟರ್ ಚಂದ್ರಪ್ಪ ತಿಳಿಸಿದ್ದಾರೆ.
ಅಪರಾಧ ಕೃತ್ಯಗಳನ್ನ ಸದ್ದಡಗಿಸುವುದಕ್ಕೆ ಪೊಲೀಸರು ಸಜ್ಜು: ಇನ್ಸ್ಪೆಕ್ಟರ್ ತಂಡ ಪ್ರತಿ ಪ್ರಕರಣವನ್ನು ಎಎಸ್ಪಿ ಅಧಿಕಾರಿಗೆ ಮಾಹಿತಿ ನೀಡಿ, ಸದ್ಯದ ರೌಡಿ ಚಲನವಲನವನ್ನು ಗುರುತಿಸುವಂತೆ ಸೂಚಿಸಿದರು. ಗಾಂಜಾ ಮತ್ತಿನಲ್ಲಿ ಯುವಕರ ಚಲನ ವಲನಗಳ ಮೇಲೆ ಪೊಲೀಸರು ಹೆಚ್ಚು ಕಣ್ಣಿಟ್ಟಿದ್ದಾರೆ. ಈ ಬಾರಿ ಎಂದೂ ರೌಡಿ ಪರೇಡ್ನಲ್ಲಿ ಕಾಣಿಸದ ಕುಖ್ಯಾತಿ ಹೊಂದಿರುವ ಮಾಜಿ ಪುರಸಭಾದ್ಯಕ್ಷ, ಹಾಲಿ ಸದಸ್ಯ ಮಲ್ಲೆಲು ಬಿ ನಾಗರಾಜ್ ಹಾಗು ಪತಂಜಲಿ ವಿಶ್ವನಾಥ್ರನ್ನು ಕರೆಸಿರುವುದು ಆನೇಕಲ್ ಭಾಗದಲ್ಲಿ ಅಪರಾಧ ಕೃತ್ಯಗಳನ್ನ ಸದ್ದಡಗಿಸುವುದಕ್ಕೆ ಪೊಲೀಸರು ಟೊಂಕ ಕಟ್ಟಿ ನಿಂತಿರುವುದಕ್ಕೆ ಸಾಕ್ಷಿಯಾಗಿದೆ.
ಫೋನ್ ಕುರಿತ ಸುಳ್ಳುಗಳಿಗೆ ಅವಕಾಶ ಇರಬಾರದು:10 ವರ್ಷಕ್ಕೆ ಮುಂಚೆ ರೌಡಿ ಶೀಟರ್ ಆಗಿದ್ದು, ಸಕ್ರಿಯರಿಲ್ಲದೆ ವಯಸ್ಸಾಗಿದ್ದರೆ ಶಾಂತವಾಗಿ ಬದುಕಲು ಅವಕಾಶ ನೀಡಲಾಗುವುದು. ಪ್ರತಿ ಭಾನುವಾರ ಠಾಣೆಗೆ ಬಂದು ಹಾಜರಾಗಿ ಮಾಹಿತಿ ನೀಡಬೇಕು. ಬೇರೆಡೆ ಹೊರಡಬೇಕಾದರೆ ಸಕಾರಣ ನೀಡಿ ತೆರಳಬೇಕು. ಪದೇ ಪದೆ ಸಿಮ್ ಬದಲಾವಣೆ, ಫೋನ್ ಕುರಿತ ಸುಳ್ಳುಗಳಿಗೆ ಅವಕಾಶ ಇರಬಾರದು. ಆನೇಕಲ್ ಭಾಗದಲ್ಲಿ ಸದ್ದು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ಎಚ್ಚರಿಸಿದರು.
ರೌಡಿಗಳು ಬಳಸುವ ವಾಹನಗಳ ಮಾಹಿತಿ ತಿಳಿಸಬೇಕು. ಬೇರೆ ವಾಹನ ಬಳಸಬಾರದು. ನಿಮ್ಮ ನಿಮ್ಮ ವಕೀಲರ ಮಾಹಿತಿ ತಿಳಿಸಬೇಕು. ಎಲ್ಲಿ ಕೆಲಸದಲ್ಲಿ ಇದ್ದೀರಿ ಎನ್ನುವ ಮಾಹಿತಿ ನೀಡಬೇಕು. ಸಾರ್ವಜನಿಕ ಸ್ಥಳದಲ್ಲಿ, ಒಂದು ಘಟನೆಯಲ್ಲಿ ನಿಮ್ಮ ಹೆಸರು ಕೇಳಿಬಂದರೆ ಕಠಿಣವಾದ ಕ್ರಮ ಜರುಗಿಸಲಾಗುವುದು ಎಂದು ರೌಡಿಗಳಿಗೆ ಸೂಚಿಸಿದರು.
ಇದನ್ನೂ ಓದಿ :6 ತಿಂಗಳಲ್ಲಿ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣ ಭೇದಿಸಿದ ದಾವಣಗೆರೆ ಪೊಲೀಸರು