ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಕಾರು ಪರಿಶೀಲನೆ ಮಾಡಲು ಹೋಗಿದ್ದ ಕಾನ್ಸ್‌ಟೇಬಲ್ ಮೇಲೆ ಮತ್ತೊಂದು ಕಾರು ಹರಿದು ಅವರು ದುರಂತ ಅಂತ್ಯಕಂಡ ಘಟನೆ ಇಂದು ಬೆಳಗಿನ ಜಾವ ದೇವನಹಳ್ಳಿ ಹೈವೇಯ ಚಿಕ್ಕಜಾಲ ಬಳಿ ನಡೆದಿದೆ. ರಾತ್ರಿ ಪಾಳೆಯದಲ್ಲಿ ಕರ್ತವ್ಯದಲ್ಲಿದ್ದ ಸುರೇಶ್ ಮೃತರೆಂದು ತಿಳಿದುಬಂದಿದೆ.
ದೇವನಹಳ್ಳಿ ಇನ್ಸ್ಪೆಕ್ಟರ್ ಧರ್ಮೇ ಗೌಡ ಮತ್ತು ಅವರ ಜೀಪ್ ಚಾಲಕ ಸುರೇಶ್ ಚಿಕ್ಕಜಾಲ ಬಳಿ ಬಂದಾಗ ಹೆದ್ದಾರಿ ಬದಿಯಲ್ಲಿ ಕೆಟ್ಟು ನಿಂತಿದ್ದ ಕಾರು ಕಂಡು ಪರಿಶೀಲನೆಗೆ ಮುಂದಾಗಿದ್ದಾರೆ. ಕಾನ್ಸ್‌ಟೆಬಲ್ ಸುರೇಶ್ ಜೀಪ್ನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಅದೇ ಸಮಯಕ್ಕೆ ವೇಗವಾಗಿ ಬಂದ ಇನ್ನೊಂದು ಕಾರು ಸುರೇಶ್ ಅವರಿಗೆ ಡಿಕ್ಕಿಯಾಗಿದೆ. ಬಳಿಕ ಕೆಟ್ಟು ನಿಂತಿದ್ದ ಇನ್ನೋವಾ ಕಾರಿಗೂ ಗುದ್ದಿದೆ. ಪರಿಣಾಮ ಸುರೇಶ್ ಮೃತಪಟ್ಟಿದ್ದಾರೆ. ಇನ್ಸ್ಪೆಕ್ಟರ್ಗೆ ಫೋನ್ ಕಾಲ್ ಬಂದಿದ್ದು ಮಾತನಾಡಲು ಕೊಂಚ ರಸ್ತೆಬದಿಗೆ ತೆರಳಿದ್ದರಿಂದ ಕೂದಲೆಳೆ ಅಂತರದಲ್ಲಿ ಅವರು ಪಾರಾಗಿದ್ದಾರೆ. ನಿಂತಿದ್ದ ಕಾರಿನಲ್ಲಿ ಕುಳಿತಿದ್ದ ಚಾಲಕನ ಕೈಕಾಲುಗಳಿಗೂ ಗಂಭೀರ ಗಾಯಗಳಾಗಿವೆ.
ಅಪಘಾತವೆಸಗಿದ ಕಾರಿನಲ್ಲಿ ಮೂವರು ಯುವಕರು, ಮೂವರು ಯುವತಿಯರಿದ್ದರು. ಅವರಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೆಬಲ್ ಸುರೇಶ್ ದುರ್ಮರಣಕ್ಕೆ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೈವೇಗಳಲ್ಲಿ ಪೊಲೀಸರು ರಾತ್ರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸುವಾಗ ಲೈಟಿಂಗ್ ಬ್ಯಾಟರ್ನ್, ರಿಫ್ಲೆಕ್ಟ್ ಜಾಕೆಟ್ ಬಳಸಬೇಕು. ಈ ಮೂಲಕ ಅಪಘಾತಗಳನ್ನು ತಡೆಗಟ್ಟಬಹುದು ಎಂದು ಪೊಲೀಸರು ಸಲಹೆ ನೀಡಿದ್ದಾರೆ.