ದೇವನಹಳ್ಳಿ(ಬೆಂಗಳೂರು): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಅಂದಹಾಗೆ ಸೋಮವಾರ ಸಂಜೆ ಸಿಂಗಾಪುರದಿಂದ ಬೆಂಗಳೂರಿಗೆ ಬಂದಿಳಿದಿದ್ದ ಭಾರತೀಯ ಮೂಲದ ಇಬ್ಬರು ಪ್ರಯಾಣಿಕರು, ಅಧಿಕಾರಿಗಳ ಕಣ್ತಪ್ಪಿಸಲು ಬೆಲ್ಟ್ ಒಳಗಡೆ ಚಿನ್ನವನ್ನು ಅಡಗಿಸಿಟ್ಟುಕೊಂಡು ಅಕ್ರಮವಾಗಿ ಚಿನ್ನ ಸಾಗಣೆಗೆ ಮಾಡಲು ಯತ್ನಿಸಿದ್ದರು.
ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದ್ದಾರೆ. ಈ ವೇಳೆ ಇಬ್ಬರು ಚಿನ್ನದ ಸರಗಳನ್ನು ಬೆಲ್ಟ್ ಒಳಗಡೆ ಹಾಕಿಕೊಂಡು ಬಂದಿರುವುದು ಪತ್ತೆಯಾಗಿದೆ. ಆರೋಪಿಗಳಿಂದ ಸುಮಾರು 1 ಕೋಟಿ 59 ಲಕ್ಷ ಮೌಲ್ಯದ 2 ಕೆಜಿ 610 ಗ್ರಾಂ ಚಿನ್ನವನ್ನ ಸೀಜ್ ಮಾಡಲಾಗಿದೆ. ಚಿನ್ನ ಸಮೇತ ಇಬ್ಬರು ಪ್ರಯಾಣಿಕರನ್ನ ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಅಕ್ರಮ ಚಿನ್ನ ಸಾಗಣೆ ಮಾಡಲು ಯತ್ನಿಸಿದ್ದ ವ್ಯಕ್ತಿ ಬಂಧನ:ಇತ್ತೀಚಿಗೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಮಧ್ಯಪ್ರದೇಶದ ಇಂದೋರ್ನಿಂದ ವಿಮಾನದಲ್ಲಿ ಬಂದಿದ್ದ ಚೆನ್ನೈ ಮೂಲದ ವ್ಯಕ್ತಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ. ಅಧಿಕಾರಿಗಳು ಬಂಧಿತನಿಂದ ಬರೋಬ್ಬರಿ 4 ಕೋಟಿ ರೂ. ಮೌಲ್ಯದ 6.5 ಕೆಜಿ ತೂಕದ 7 ಚಿನ್ನದ ಬಿಸ್ಕೆಟ್ಗಳನ್ನು ವಶಪಡಿಸಿಕೊಂಡಿದ್ದರು.
ಇನ್ನು, ಸ್ಮಗ್ಲರ್ಸ್ ಮೊದಲೇ ಸೀಟ್ ಕೆಳಗಡೆ ಚಿನ್ನವನ್ನಿಟ್ಟು ಬಂಧಿತ ಆರೋಪಿಗೆ ತಿಳಿಸಿದ್ದರು. ಹೀಗಾಗಿ ಬಂಧಿತ ಆರೋಪಿ ಅದೇ ಸೀಟ್ ಬುಕ್ ಮಾಡಿಕೊಂಡು ಬೆಂಗಳೂರಿಗೆ ಬರುತ್ತಿದ್ದಂತೆ ಆತ ಸೀಟ್ ಕೆಳಗೆ ಇಟ್ಟಿದ್ದ ಚಿನ್ನವನ್ನು ಬ್ಯಾಗ್ನಲ್ಲಿ ಹಾಕಿಕೊಂಡು ವಿಮಾನ ಇಳಿದು ಬಂದಿದ್ದ. ಆದ್ರೆ, ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಕೋಟ್ಯಂತರ ಮೌಲ್ಯದ ಚಿನ್ನ ಪತ್ತೆಯಾಗಿತ್ತು. ದೇಶಿಯ ಪ್ರಯಾಣಿಕರನ್ನು ಚೆಕ್ ಮಾಡಲ್ಲ, ಸುಲಭವಾಗಿ ಚಿನ್ನ ಸಾಗಿಸಬಹುದು ಎಂದು ಪ್ಲಾನ್ ಮಾಡಿದ್ದ. ಆದ್ರೆ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದಿದ್ದ. ಈ ಸಂಬಂಧ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು, ವಿಮಾನದ ಸೀಟ್ ಕೆಳಗಡೆ ಚಿನ್ನವಿಟ್ಟವರ ಬಗ್ಗೆ ತನಿಖೆ ಮುಂದುವರೆಸಿದ್ದರು.
ಮಂಗಳೂರು ಏರ್ಪೋರ್ಟ್ನಲ್ಲಿ 90 ಲಕ್ಷ ರೂ. ಮೌಲ್ಯದ ಚಿನ್ನ ವಶ: ಈ ವರ್ಷ ಮಾರ್ಚ್ನಲ್ಲಿ ದುಬೈನಿಂದ ಬಂದಿಳಿದ ಪ್ರಯಾಣಿಕರು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಲು ಯತ್ನಿಸಲಾಗುತ್ತಿದ್ದ ಸುಮಾರು 90 ಲಕ್ಷ ರೂ.ಮೌಲ್ಯದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. 2023ರ ಮಾರ್ಚ್ 1 ರಿಂದ 15 ರ ಅವಧಿಯಲ್ಲಿ ದುಬೈನಿಂದ ಬಂದ ಒಂದು ಹೆಣ್ಣು ಮಗು ಸೇರಿದಂತೆ ಮೂವರು ಪ್ರಯಾಣಿಕರಿಂದ 90,67,750 ರೂಪಾಯಿ ಮೌಲ್ಯದ 1,606 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ:Pickpockets arrested: ಜೇಬುಗಳ್ಳತನವೇ ಇವರ ಕಸುಬು! ಒಂದೇ ಕುಟುಂಬದ ಸದಸ್ಯರೂ ಸೇರಿ ಐವರ ಬಂಧನ