ಸೇಹಿತನ ಮೇಲೆ ಹಣದ ವಿಚಾರವಾಗಿ ಹಲ್ಲೆ ನಡೆಸಿರುವ ಬಗ್ಗೆ ಗಜೇಂದ್ರ ಎಂಬುವವರು ಮಾಹಿತಿ ನೀಡಿದ್ದಾರೆ ದೇವನಹಳ್ಳಿ :ಕುಡಿದ ಅಮಲಿನಲ್ಲಿ ಹಣಕಾಸಿನ ವಿಚಾರಕ್ಕೆ ಕಿರಿಕ್ ಮಾಡಿಕೊಂಡು, ಸ್ನೇಹಿತನಿಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದ ಯುವಕನ ಹೆಸರು ನಂಜೇಗೌಡ (30) ಎಂಬುದು ತಿಳಿದುಬಂದಿದೆ. ಸೂಲಿಬೆಲೆ ಗ್ರಾಮದ ಈ ಯುವಕ ಕುಡಿದ ಅಮಲಿನಲ್ಲಿ ಸ್ನೇಹಿತನ ಬಳಿ ಕಿರಿಕ್ ಮಾಡಿಕೊಂಡು ಇದೀಗ ಮಚ್ಚಿನಿಂದ ಏಟು ತಿಂದು ಆಸ್ಪತ್ರೆ ಪಾಲಾಗಿದ್ದಾನೆ. ಅಂದಹಾಗೆ ಸೂಲಿಬೆಲೆ ಗ್ರಾಮದ ಆರೋಪಿ ಬಸವರಾಜ್ ಹಾಗೂ ಹಲ್ಲೆಗೊಳಗಾದ ನಂಜೇಗೌಡ ಇಬ್ಬರು ಸ್ನೇಹಿತರು. ನಂಜೇಗೌಡ ಸ್ನೇಹಿತ ಕೇಶವ ಎನ್ನುವವರಿಗೆ ಆರೋಪಿ ಬಸವರಾಜ್ ತಂದೆ ರತ್ನಪ್ಪ ಮನೆಯಲ್ಲಿ ಬಾಡಿಗೆ ಮನೆಯನ್ನ ಕೊಡಿಸಿದ್ದ. ಮೂರು ತಿಂಗಳು ಬಾಡಿಗೆ ಕಟ್ಟದ ನಂಜೇಗೌಡ ಸ್ನೇಹಿತ ಕೇಶವ ಮನೆಯನ್ನ ಖಾಲಿ ಮಾಡಿದ್ದ.
ಮಚ್ಚಿನಿಂದ ಮಾರಣಾಂತಿಕ ಹಲ್ಲೆ: ಬಾಡಿಗೆ ಹಣವನ್ನ ಕೇಶವನ ಬಳಿ ಕೇಳೋದು ಬಿಟ್ಟು ಮಾಲೀಕ ರತ್ನಪ್ಪ ನಂಜೇಗೌಡನ ಬಳಿ ಪದೇ ಪದೆ ಕೇಳುತ್ತಿದ್ದ. ಹೀಗಾಗಿ ನಂಜೇಗೌಡ ರತ್ನಪ್ಪನಿಗೆ ನಾನು ಯಾವ ಹಣ ನಿನಗೆ ಕೊಡೋದು ಇಲ್ಲಪ್ಪ. ನಿನ್ನ ಮಗ ಬಸವರಾಜ ನನಗೆ ಹಣ ಕೊಡಬೇಕು ಎಂದಿದ್ದಾನೆ. ಈ ಬಗ್ಗೆ ತಂದೆ ರತ್ನಪ್ಪ ಬಸವರಾಜ್ ಬಳಿ ಗಲಾಟೆ ಮಾಡಿದ್ದು, ಇದರಿಂದ ಕೋಪಗೊಂಡು ಬಾರ್ ಬಳಿ ಬಂದ ಬಸವರಾಜ್ ನಂಜೇಗೌಡನ ಬಳಿ ಕಿರಿಕ್ ತೆಗೆದು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಕಳೆದ ದಶಕಗಳಿಂದಲೂ ಬಸವರಾಜ್ ಹಾಗೂ ಹಲ್ಲೆಗೊಳಗಾದ ನಂಜೇಗೌಡ ಸ್ನೇಹಿತರು. ಹಾಗೇ ತನ್ನ ಕಷ್ಟ ಸುಖಗಳಿಗೆ ಹಣಕಾಸು ಕೊಡೋದು, ತೆಗೆದುಕೊಳ್ಳೋದು ಮಾಡ್ತಿದ್ರಂತೆ. ಆದ್ರೆ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರವಾಗಿದ್ದರಂತೆ. ಹೀಗಿದ್ದು ಬಾಡಿಗೆ ಮನೆಯ ಹಣದ ವಿಚಾರಕ್ಕೆ ಬಸವರಾಜ್ ತಂದೆ ರತ್ನಪ್ಪ ನಂಜೇಗೌಡನ ಬಳಿ ಹಣ ಕೇಳಿದ್ದಕ್ಕೆ ಬಸವರಾಜ್ ಹಣ ಕೊಡಬೇಕು ಎಂದಿದ್ದೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.
ಹೊಸಕೋಟೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು: ಇನ್ನು ಶುಕ್ರವಾರ ರಾತ್ರಿ ಬಾರ್ ಬಳಿ ಬಂದು ಇದೇ ವಿಚಾರವಾಗಿಯೇ ಕಿರಿಕ್ ತೆಗೆದು, ನಮ್ಮಪ್ಪನಿಗೆ ನಾನು ಹಣ ಕೊಡಬೇಕು ಅಂತೀಯಾ? ಅಂತಾ ಏಕಾಏಕಿ ಕುಡಿದ ಅಮಲಿನಲ್ಲಿ ಬಸವರಾಜ್ ಸ್ನೇಹಿತ ನಂಜೇಗೌಡನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಇನ್ನು ಈ ವೇಳೆ ನಂಜೇಗೌಡನ ಜೊತೆ ಇದ್ದ ಮತ್ತೊಬ್ಬ ಗಜೇಂದ್ರ ಕೂಗಿಕೊಂಡು ಓಡೋಗಿ ಪೊಲೀಸರನ್ನ ಕರೆದುಕೊಂಡು ಬಂದಿದ್ದಾರೆ. ಅಸ್ವಸ್ಥನಾಗಿದ್ದ ನಂಜೇಗೌಡನನ್ನ ಹೊಸಕೋಟೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಈ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿ ಬಸವರಾಜನನ್ನು ಬಂಧಿಸಿದ್ದಾರೆ. ಒಟ್ಟಿನಲ್ಲಿ ಹಣಕಾಸಿನ ವಿಚಾರದಲ್ಲಿ ಏನೇ ಇರಲಿ, ಇಬ್ಬರು ದೂರವಾಗಿದ್ದ ಸ್ನೇಹಿತರು ಕುಳಿತು ಮಾತನಾಡಿಕೊಳ್ಳಬಹುದಿತ್ತು. ದುಡುಕಿನ ನಿರ್ಧಾರದಿಂದ ಇದೀಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸ್ನೇಹಿತ ಹೋರಾಟ ನಡೆಸುತ್ತಿದ್ದಾನೆ.
ಇದನ್ನೂ ಓದಿ:ಆನೇಕಲ್ ಸುತ್ತ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು.. ಪೊಲೀಸರಿಂದ ರೌಡಿಗಳ ಪರೇಡ್