ದೊಡ್ಡಬಳ್ಳಾಪುರ: ಎಲೆಕ್ಟ್ರಿಕ್ ಬೈಕ್ ಖರೀದಿಸಿದ 6 ತಿಂಗಳಲ್ಲೇ ಹಲವು ಸಮಸ್ಯೆಗಳು ಎದುರಾಗುತ್ತಿವೆ. ನಡುರಸ್ತೆಯಲ್ಲೇ ಬೈಕ್ಗಳು ಕೆಟ್ಟು ನಿಲ್ಲುತ್ತಿವೆ. ಗ್ರಾಹಕರು ಬೈಕ್ ಸಮಸ್ಯೆ ಕುರಿತು ಕಂಪನಿ ಮತ್ತು ಡೀಲರ್‌ಗಳಿಗೆ ಹೇಳಿದರೆ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಕಂಪನಿಯ ಧೋರಣೆಯಿಂದ ಬೇಸತ್ತ ಗ್ರಾಹಕರು ಎಲೆಕ್ಟ್ರಿಕ್ ದ್ವಿಚಕ್ರವಾಹನ ಶೋ ರೂಂಗೆ ಮುತ್ತಿಗೆ ಹಾಕಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೊಡ್ಡಬಳ್ಳಾಪುರ ನಗರದ ರಂಗಪ್ಪ ಸರ್ಕಲ್ನಲ್ಲಿರುವ ಶೋ ರೂಂಗೆ ನಿನ್ನೆ (ಶನಿವಾರ) ಮಧ್ಯಾಹ್ನ ಮುತ್ತಿಗೆ ಹಾಕಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕೊಂಡುಕೊಳ್ಳುವ ಸಮಯದಲ್ಲಿ ಶೋ ರೂಂನವರು 3 ವರ್ಷ ಗ್ಯಾರೆಂಟಿ ಇರುವುದಾಗಿ ಹೇಳಿದ್ದರು. ಆದರೆ ಬೈಕ್ ಖರೀಸಿದ ಆರೇ ತಿಂಗಳಲ್ಲಿ ಬ್ಯಾಟರಿ ಸಮಸ್ಯೆ ಉದ್ಭವಿಸಿ ಎಲ್ಲೆಂದರಲ್ಲಿ ನಿಂತು ನಿತ್ಯ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ" ಎಂದು ಗ್ರಾಹಕರು ದೂರಿದ್ದಾರೆ.
"ಒಮ್ಮೆ ಬೈಕ್ ನಿಂತರೇ ಇದನ್ನು ಸಾಗಿಸಲು ಮತ್ತೊಂದು ನಾಲ್ಕು ಚಕ್ರದ ವಾಹನವನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ಯಾಟರಿ ಬದಲಿಸುವಂತೆ ಹೇಳಿ ಸುಮಾರು ಒಂದು ತಿಂಗಳಾದರೂ ಶೋ ರೂಂ ಡೀಲರ್‌ಗಳು ಮತ್ತು ಸಬ್ ಡೀಲರ್‌ಗಳು ತಲೆಕೆಡಿಸಿಕೊಳ್ಳುತ್ತಿಲ್ಲ" ಎಂದು ಛಾಯಾಗ್ರಾಹಕರ ಸಂಘದ ತಾಲೂಕು ಅಧ್ಯಕ್ಷ ಅಶ್ವತ್ಥ್ ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡರು.
ಇದನ್ನೂ ಓದಿ:ಇಂಧನ ದರ ಹೆಚ್ಚಳ : ಪರಿಸರ ಸ್ನೇಹಿ electric bike ಮೊರೆ ಹೋದ ಶಿವಮೊಗ್ಗ ಜನ