ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):ಮೈಸೂರಿನಲ್ಲಿ ಇಂದು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.
ವಿಶೇಷ ವಿಮಾನದಲ್ಲಿ ಆಗಮಿಸಿದ ರಾಹುಲ್ ಇದೀಗ ವಿಮಾನ ನಿಲ್ದಾಣದಿಂದ ನೇರವಾಗಿ ಹೆಲಿಕಾಪ್ಟರ್ನಲ್ಲಿ ಮೈಸೂರಿನತ್ತ ತೆರಳುತ್ತಿದ್ದಾರೆ. ರಾಹುಲ್ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ ತೆರಳಲಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಿದ್ಧಗೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು, ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ವೇಳೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಶಿವಕುಮಾರ್, ''ಇಂದು ಎಲ್ಲ ಮಹಿಳೆಯರ ಅಕೌಂಟ್ಗೆ ಹಣ ಮಂಜೂರಾತಿ ಆಗಲಿದೆ. ಬ್ಯಾಂಕ್ನವರು ಸಮಯ ನಿಗದಿ ಮಾಡಿಕೊಂಡು ಹಂತ ಹಂತವಾಗಿ ಹಣ ಹಾಕಲಿದ್ದಾರೆ'' ಎಂದು ತಿಳಿಸಿದರು. ಗ್ಯಾರಂಟಿಗಳಿಂದ ರಾಜ್ಯ ಅರ್ಥಿಕ ದಿವಾಳಿ ಎಂಬ ಬೊಮ್ಮಾಯಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ''ಮೋದಿಯವರು ಯಾಕೆ ಸಿಲಿಂಡರ್ ಮೇಲೆ 200 ರೂ. ಸಬ್ಸಿಡಿ ಅನೌನ್ಸ್ ಮಾಡಿದ್ರು? ಅದು ದಿಕ್ಕು ತಪ್ಪಿಸಲ್ವಾ? ಹೆಣ್ಣು ಮಕ್ಕಳಿಗೆ ಯಾಕೆ 200 ರೂಪಾಯಿ ಕಡಿತ ಮಾಡಿದ್ದಾರೆ. ಮಧ್ಯಪ್ರದೇಶದ ಸಿಎಂ ಯಾಕೆ ಹೆಣ್ಣುಮಕ್ಕಳಿಗೆ 1500 ರೂಪಾಯಿ ಘೋಷಣೆ ಮಾಡಿದ್ದಾರೆ'' ಎಂದು ಪ್ರಶ್ನಿಸಿದರು.