ದೊಡ್ಡಬಳ್ಳಾಪುರ :ಕೊರೊನಾ ತುರ್ತು ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ತಾಯಿ, ಮಗು ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿ 70 ಹಾಸಿಗೆಯ ಸುಸಜ್ಜಿತ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಕಂದಾಯ ಸಚಿವ ಆರ್.ಅಶೋಕ್, ಶಾಸಕರಾದ ಟಿ.ವೆಂಕಟರಮಣಯ್ಯ ಉಪಸ್ಥಿತರಿದ್ದರು.
70 ಹಾಸಿಗೆಯ ಸುಸಜ್ಜಿತ ಮೇಕ್ ಶಿಫ್ಟ್ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಯಡಿಯೂರಪ್ಪ ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, 70 ಬೆಡ್ಗಳ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಮಾಡಿರುವುದು ಕರ್ನಾಟಕದಲ್ಲಿಯೇ ವಿನೂತನ ಕಾರ್ಯಕ್ರಮವಾಗಿದೆ. ದೇಶದ 6 ರಾಜ್ಯಗಳಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮೊದಲ ಬಾರಿ ಅತ್ಯಂತ ವೇಗವಾಗಿ ಅಂದರೆ 30 ದಿನಗಳಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ಸಿದ್ಧವಾಗಿದೆ. ಇದನ್ನು ಕೊರೊನಾ ಬಳಿಕವೂ ಸಾರ್ವಜನಿಕ ಸೇವೆಗೆ ಬಳಸಲಾಗುತ್ತದೆ. ದೊಡ್ಡಬಳ್ಳಾಪುರ ಸುತ್ತಮುತ್ತಲಿನ ಜನರಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಇನ್ನು, ರಾಜ್ಯದಲ್ಲೇ ಮೊದಲ ಬಾರಿಗೆ 'ವೈದ್ಯರ ನಡೆ ಹಳ್ಳಿ ಕಡೆ' ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರಂಭಿಸಲಾಯಿತು. ಜನರ ಮನೆ ಬಾಗಿಲಿಗೆ ಹೋಗಿ ಕೊರೊನಾ ಔಷಧಿಗಳ ಕಿಟ್ ನೀಡಲಾಗಿತ್ತು. ಈ ಕಾರ್ಯಕ್ರಮದಡಿ 4,600 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಅಂತಹ ಮಕ್ಕಳಿಗೆ ಉಚಿತ ಪೌಷ್ಠಿಕ ಆಹಾರ ನೀಡಲಾಗುತ್ತದೆ ಎಂದರು.
ನಂತರ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಖಾಸಗಿ ಕಂಪನಿಗಳ ನೆರವಿನಿಂದ ರಾಜ್ಯದ ಮೊದಲ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣವಾಗಿದೆ.
ಸಂಪತ್ತು ಬಂದಾಗ ದಾನ, ಬಡತನ ಬಂದಾಗ ಧ್ಯಾನ, ಅಧಿಕಾರ ಬಂದಾಗ ಸೇವೆ ಮಾಡಬೇಕು. ಕೇಂದ್ರ, ರಾಜ್ಯ ಸರ್ಕಾರ ಕೋವಿಡ್ ವಿರುದ್ಧ ಯಶಸ್ವಿಯಾಗಿ ಹೋರಾಟ ಮಾಡುತ್ತಿದೆ.
ಸರ್ಕಾರ ಕೊರೊನಾ ಚಿಕಿತ್ಸೆಗಾಗಿ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಿದೆ. ದೊಡ್ಡಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಇಲ್ಲ, ದೊಡ್ಡದೊಡ್ಡ ಆಸ್ಪತ್ರೆ ಇಲ್ಲ. ಇಂತಹ ನಗರವನ್ನು ಗುರುತಿಸಿ 70 ಬೆಡ್ಗಳ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಈ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಕ್ಕೆ ಸಿಎಂಗೆ ಧನ್ಯವಾದ ಅರ್ಪಿಸಿದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಯಡಿಯೂರಪ್ಪ ನೇತೃತ್ವದಲ್ಲಿ 3ನೇ ಅಲೆ ಎದುರಿಸಲು ಸಿದ್ಧ. ಮೂರನೇ ಅಲೆ ವೇಳೆ ಮಕ್ಕಳ ತಜ್ಞರು ಹಾಗೂ ಆಸ್ಪತ್ರೆ ಕೊರತೆ ಆಗಬಾರದು. ಮಕ್ಕಳಿಗೆ ಚಿಕಿತ್ಸೆ ಕೊಡುವ ಸಂಬಂಧ ಇತರೆ ಪರಿಣಿತ ವೈದ್ಯರಿಗೆ ನಿಮ್ಹಾನ್ಸ್ನಲ್ಲಿ ತರಬೇತಿ ನೀಡಲಾಗುತ್ತಿದೆ. 3ನೇ ಅಲೆಯನ್ನ ಎದುರಿಸೋದು ನಮ್ಮ ಸರ್ಕಾರದಿಂದ ದೃಢ ಸಂಕಲ್ಪ. ಕೇವಲ 1 ತಿಂಗಳ ಅವಧಿಯಲ್ಲಿ ರಾಜ್ಯದ ಮೊಟ್ಟ ಮೊದಲ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣವಾಗಿದೆ. ವಿರೋಧ ಪಕ್ಷದವರು ಟೀಕೆ, ಟಿಪ್ಪಣಿ ಸದಾ ಮಾಡ್ತಾರೆ. ಎಷ್ಟೇ ಟೀಕೆ ಮಾಡಿದ್ರೂ ಸರ್ಕಾರದ ಕೆಲಸ ನಿರಂತರ ಮಾಡಿದ್ದೇವೆ ಎಂದರು.
ಇದನ್ನೂ ಓದಿ:‘ಸಾರಿ ಫ್ರೆಂಡ್, ಮತ್ತೆ ವಾಪಸ್ ಕೊಡ್ತೀನಿ’... ಪೊಲೀಸ್ ಅಧಿಕಾರಿ ಮನೆಯಲ್ಲಿ ಕಳ್ಳತನ ಮಾಡಿ ಪತ್ರ ಬರೆದಿಟ್ಟ ಭೂಪ!