ದೊಡ್ಡಬಳ್ಳಾಪುರ:ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ತಮ್ಮ ಕಾರನ್ನೇ ನೀಡಿ, ತಾವು ಬೇರೆ ಕಾರಿನಲ್ಲಿ ಪ್ರಯಾಣಿಸುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ತೂಬಗೆರೆ ಹೋಬಳಿಯ ಬಾಲೇನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಮತ್ತು ಅವರ ಪತ್ನಿ ರಾಧಾ ಎನ್ನುವವರು ದೊಡ್ಡಬಳ್ಳಾಪುರದ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ, ಗುಂಗಿರ್ಲಹಳ್ಳಿ ಸಮೀಪ ಬೈಕ್ನ ಚಕ್ರಕ್ಕೆ ಬಟ್ಟೆ ಸಿಲುಕಿಕೊಂಡ ಕಾರಣ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ರಾಧಾ ಅವರು ಗಾಯಗೊಂಡು ರಸ್ತೆ ಮೇಲೆ ಬಿದ್ದಿದ್ದರು.
ಈ ವೇಳೆ ಇದೇ ದಾರಿಯಲ್ಲಿ ಕಾರ್ಯ ನಿಮಿತ್ತ ಅಧಿಕಾರಿಗಳೊಂದಿಗೆ ಬಂದ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಹಾಗೂ ಇತರೆ ಸಿಬ್ಬಂದಿ ಅಪಘಾತಕ್ಕೀಡಾದ ದಂಪತಿಯನ್ನು ಉಪಚರಿಸಿದ್ದಾರೆ. ಗಾಯಗೊಂಡಿದ್ದ ರಾಧಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ತಮ್ಮ ಸಿಬ್ಬಂದಿಗೆ ಸೂಚಿಸಿದ ಎಸ್ಪಿ ಅವರು ತಮ್ಮ ಕಾರನ್ನೇ ಬಳಕೆಗೆ ನೀಡಿದ್ದಾರೆ.
ಬಳಿಕ ಅವರು ತಮ್ಮ ಸಿಬ್ಬಂದಿ ಕಾರಿನಲ್ಲಿ ತೆರಳಿದ್ದಾರೆ. ಗಾಯಗೊಂಡ ರಾಧಾ ಅವರನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಬಿ.ನವೀನ್ ಕುಮಾರ್, ನಗರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಗೋವಿಂದ್ ಅವರು ಆಸ್ಪತ್ರೆಗೆ ಭೇಟಿ ನೀಡಿ ರಾಧಾ ಅವರ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಎಸ್ಪಿ ಮಿಥುನ್ಕುಮಾರ್ ಅವರ ಈ ಕಾರ್ಯಕ್ಕೆ ಕುಟುಂಬಸ್ಥರು ಧನ್ಯವಾದ ಹೇಳಿದ್ದಾರೆ. ಅಲ್ಲದೇ, ಸಾರ್ವಜನಿಕರ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:ಕಾಸರಗೋಡಿನಲ್ಲಿ ಕನ್ನಡ ಬಾರದ ಶಿಕ್ಷಕರ ನೇಮಕ: ಕೇರಳ ಸರ್ಕಾರದ ಜೊತೆ ಮಾತುಕತೆ- ಸಚಿವ ಸುನೀಲ್ ಕುಮಾರ್