ಆನೇಕಲ್ :ಇತ್ತೀಚೆಗೆ ಗ್ರಾಮಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ಚಿರತೆ ಓಡಾಟದ ಘಟನೆ ಸದ್ದು ಮಾಡಿತ್ತು. ಅದರಂತೆ ಚಿರತೆಯನ್ನು ಹಿಡಿದು ಅರಣ್ಯಾಧಿಕಾರಿಗಳು ಕ್ರಮ ವಹಿಸಿದ್ದರು. ಇದೀಗ ಇದನ್ನೇ ನೆಪವಿಟ್ಟು ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ಪುಂಡರ ಗುಂಪೊಂದು ದೂರದಿಂದ ಬೆಕ್ಕಿನ ದೃಶ್ಯ ಸೆರೆಹಿಡಿದು ಆ ಫೋಟೋವನ್ನು ಎಡಿಟ್ ಮಾಡಿ, ಗ್ರಾಮದಲ್ಲಿ ಚಿರತೆ ಸಂಚಾರ ಎಂದು ವದಂತಿಯನ್ನು ಹಬ್ಬಿಸಿ, ವಾಟ್ಸಪ್ ಗುಂಪುಗಳಿಗೆ ಹರಿಬಿಡುತ್ತಿರುವುದು ಅರಣ್ಯಾಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.
ಮೊನ್ನೆಯಷ್ಟೇ ಮುತ್ತಾನಲ್ಲೂರು ಗೋಪಸಂದ್ರಕ್ಕೆ ಬೆಕ್ಕೊಂದು ಬಂದ ದೃಶ್ಯವನ್ನು ದೂರದಿಂದ ಸೆರೆ ಹಿಡಿದು ಜಾಲತಾಣದಲ್ಲಿ ಹರಿಬಿಟ್ಟಿದ್ದರಿಂದ ವಿಡಿಯೋ ವೈರಲ್ ಆಗಿತ್ತು. ಹೀಗಾಗಿ ಅರಣ್ಯಾಧಿಕಾರಿಗಳು ಪಟಾಕಿ ಸಿಡಿಸಿ, ಇಡೀ ರಾತ್ರಿ ಗ್ರಾಮದ ಸುತ್ತ ಕಾವಲು ಕಾದಿದ್ದರು. ಅನಂತ ಹುಸ್ಕೂರು ಬಳಿಯ ಚಿಂತಲಮಡಿವಾಳದಲ್ಲಿ ನಾಯಿ ಹೆಜ್ಜೆ ಗುರುತುಗಳನ್ನು ಜಾಲತಾಣದಲ್ಲಿ ಹರಿಬಿಟ್ಟು, ಚಿರತೆ ಪ್ರತ್ಯಕ್ಷ ಎಂದು ಗುಲ್ಲೆಬ್ಬಿಸಲಾಗಿತ್ತು.
ಇದೀಗ ಹೀಲಲಿಗೆ ಗ್ರಾಮದಲ್ಲಿ ರಾತ್ರಿ ಮನೆಯೊಂದರ ಪಕ್ಕ ಫೋಟೋ ಎಡಿಟ್ ಮಾಡಿ ಚಿರತೆ ಪ್ರತ್ಯಕ್ಷ ಎಂದು ಫೇಸ್ಬುಕ್ ಪೇಜ್ನಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅರಣ್ಯಾಧಿಕಾರಿಗಳ ತಂಡ ರಾತ್ರಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರನ್ನು ವಿಚಾರಿಸಿದ್ದರು. ಹೀಗಾಗಿ ಚಿರತೆ ಬಗ್ಗೆ ವದಂತಿ ಹಬ್ಬಿಸುತ್ತಿರುವ ಕುರಿತು ಮಾಹಿತಿ ಹೊರಬಿದ್ದಿದೆ.