ನೆಲಮಂಗಲ (ಬೆಂಗಳೂರು. ಗ್ರಾ):ಇಲ್ಲಿನರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇಂದು ಬೆಳಗ್ಗೆ ಸ್ವಿಫ್ಟ್ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯ ಗ್ರಾಮದ ಬಳಿ ಘಟನೆ ನಡೆಯಿತು.
ಸ್ವಿಫ್ಟ್ ಕಾರಿನಲ್ಲಿದ್ದ ಐವರ ಪೈಕಿ ಮೂವರು ದುರ್ಮರಣ ಹೊಂದಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹಿಂದಿನ ಅಪಘಾತ ಪ್ರಕರಣಗಳು: ನಿಂತಿದ್ದ ಬೈಕ್ಗೆ ಗುದ್ದಿದ ಬಸ್: ಮಂಗಳೂರಿನಲ್ಲಿ ರಸ್ತೆ ದಾಟಲೆಂದು ನಿಂತಿದ್ದ ಬೈಕ್ಗೆ ವಿರುದ್ಧ ದಿಕ್ಕಿನಲ್ಲಿ ಬಂದ ಖಾಸಗಿ ಬಸ್ ರಭಸವಾಗಿ ಡಿಕ್ಕಿಯಾಗಿ ಇಬ್ಬರು ಗಾಯಗೊಂಡ ಘಟನೆ ನಡೆದಿತ್ತು. ಭಾನುವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ನ ಹೊಸಬೆಟ್ಟು ಸಮೀಪ ಘಟನೆ ನಡೆದಿದೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬೆಳಗ್ಗೆ 7:55ರ ವೇಳೆಗೆ ಖಾಸಗಿ ಎಕ್ಸ್‌ಪ್ರೆಸ್ ಬಸ್ ಶರವೇಗದಿಂದ ಬಂದು ಬೈಕ್ಗೆ ಗುದ್ದಿದೆ. ಬೈಕ್ ಸವಾರರಾದ ಪಕ್ಷಿಕೆರೆ ಹೊಸಕಾಡು ನಿವಾಸಿ ಅಬ್ದುಲ್ ಖಾದರ್ ಅರ್ಫಾನ್ ಮತ್ತು ಹಳೆಯಂಗಡಿ ಇಂದಿರಾ ನಗರದ ನಿವಾಸಿ ಅಮೀರ್ ಸಾಹಿಲ್ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು ನಗರದ ಎ.ಜೆ.ಆಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ಚಾಲಕ ಡೆಲ್ಸನ್ ಕ್ಯಾಸ್ಟಲಿನೋ ಎಂಬಾತನ ವಿರುದ್ಧ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ ಮೂವರು ಸಾವು: ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕರಾವಳಿ ಹೋಟೆಲ್ ಸಮೀಪ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ ಹೊಡೆದು, ಮೂವರು ಸಾವನ್ನಪ್ಪಿರುವ ಘಟನೆ ಆಗಸ್ಟ್ 31 ರಂದು ನಡೆದಿತ್ತು. ಹಾವೇರಿ ಜಿಲ್ಲೆಯ ಕಾಕೊಳ ತಾಂಡ ಗ್ರಾಮದ ನಿವಾಸಿಗಳಾದ ಚೆನ್ನಪ್ಪ, ರೇಖಪ್ಪ ಹಾಗು ಮಹಂತಪ್ಪ ಮೃತಪಟ್ಟ ಕಾರ್ಮಿಕರು. ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು, ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಮೂವರಿಗೆ ಡಿಕ್ಕಿ ಹೊಡೆದಿತ್ತು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರ ಪೈಕಿ ಚೆನ್ನಪ್ಪ ಎಂಬವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ರೇಖಪ್ಪ ಮತ್ತು ಮಹಂತಪ್ಪ ಎಂಬವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ರೇಖಪ್ಪ ಮೃತಪಟ್ಟಿದ್ದರು. ಮಹಂತಪ್ಪ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದರು. ಈ ಕುರಿತು ಹುಲಿಯಪ್ಪ ನೀಡಿದ ದೂರಿನ್ವಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈಲು ಜೀವಗಳು ಕೃತಿ ರಚಿಸಿದ ಲೇಖಕ ಜಿ. ಯಲ್ಲಪ್ಪ ಸಾವು: ರಸ್ತೆ ಅಪಘಾತದಲ್ಲಿ 'ಜೈಲು ಜೀವಗಳು' ಕೃತಿ ರಚಿಸಿದ ಲೇಖಕ ಜಿ. ಯಲ್ಲಪ್ಪ ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಲಿಂಗನಹಳ್ಳಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಲೇಖಕನ ತಲೆಗೆ ತೀವ್ರವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇದನ್ನೂ ಓದಿ:ಆಂಧ್ರದಲ್ಲಿ ಸಂಭವಿಸಿದ ಅಪಘಾತದಲ್ಲಿ ಅಥಣಿಯ ಆರು ಮಂದಿ ಸಾವು; ಸ್ವಗ್ರಾಮದಲ್ಲಿ ನೆರವೇರಿತು ಅಂತ್ಯಕ್ರಿಯೆ