ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸಿದರು. ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ) :ಸಚಿವ ಸಂಪುಟ ರಚನೆ ಸಂಬಂಧ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಕಾಂಗ್ರೆಸ್ ನ ಹಲವಾರು ಸಚಿವಾಕಾಂಕ್ಷಿಗಳು ಸಹ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಸೋದರನೊಂದಿಗೆ ಡಿಸಿಎಂ ಡಿಕೆಶಿ ದೆಹಲಿಗೆ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಮಧ್ಯಾಹ್ನ 2.55ರ ವಿಮಾನದಲ್ಲಿ ದೆಹಲಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರಯಾಣ ಬೆಳೆಸಿದರು. ಡಿಸಿಎಂ ಡಿಕೆಶಿ ಜೊತೆ ಅವರ ಸೋದರ ಡಿ ಕೆ ಸುರೇಶ್ ಕೂಡ ಪ್ರಯಾಣ ಬೆಳೆಸಿದರು.
ದೆಹಲಿಯಲ್ಲಿ ಸಂಪುಟ ಸರ್ಕಸ್:ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದ ವಿಸ್ತರಣೆ ಕುರಿತಾಗಿ ಮಾತುಕತೆ ನಡೆಸಲಿದ್ದಾರೆ. ಸಂಪುಟ ಸೇರಬಯಸುವ ಸಂಖ್ಯೆ ಬಹುದೊಡ್ಡದಿದ್ದು, ಇಬ್ಬರು ನಾಯಕರು ತಮ್ಮ ಆಪ್ತರನ್ನು ಸಂಪುಟಕ್ಕೆ ಸೇರಿಸುವ ಕುರಿತಾಗಿ ಹೈಕಮಾಂಡ್ ಬಳಿ ಚರ್ಚೆ ನಡೆಸಲಿದ್ದಾರೆ.
ಸಚಿವಾಕಾಂಕ್ಷಿಗಳು ದೆಹಲಿಯತ್ತ ದೌಡು: ನೂತನ ಸರ್ಕಾರದಸಚಿವ ಸಂಪುಟ ರಚನೆಯ ಕಸರತ್ತು ಗರಿಗೆದರಿದ್ದು, ಕಾಂಗ್ರೆಸ್ ನ ಹಲವಾರು ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಯತ್ತ ಹೊರಟಿದ್ದಾರೆ. ಸಂಜೆ ಸಿಎಂ ಹಾಗೂ ಡಿಸಿಎಂ ದೆಹಲಿಗೆ ತೆರಳಲಿದ್ದು ಅಷ್ಟೊತ್ತಿಗೆ ಹಲವು ಶಾಸಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಶಾಸಕ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ನಾಗೇಂದ್ರ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಹಲವು ಶಾಸಕರು ದೆಹಲಿಗೆ ಪ್ರಯಾಣ ಬೆಳೆಸಿದರು.
ದೆಹಲಿಯತ್ತ ಸಚಿವಾಕಾಂಕ್ಷಿಗಳು ಪ್ರಯಾಣ ಬೆಳೆಸಿದರು. ಇನ್ನು, ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ನೂತನ ಸರ್ಕಾರದ ಸಂಪುಟದಲ್ಲಿ ಸಾಕಷ್ಟು ಜನ ಸಚಿವಾಕಾಂಕ್ಷಿಗಳು ಇದ್ದಾರೆ. ಎರಡು ಮೂರು ದಿನದಲ್ಲಿ ಸಚಿವ ಸಂಪುಟ ರಚನೆಯಾಗಲಿದೆ. ನಾನು ಸಹ ದೆಹಲಿಗೆ ಹೋಗ್ತಿದ್ದೇನೆ. ಯಾವ ಖಾತೆ ಕೊಡ್ತಾರೆ ನೋಡೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಎಂ ಅಧಿಕಾರಾವಧಿ ಬಗ್ಗೆ ಇದೀಗ ಮಾತನಾಡೋದು ಅಪ್ರಸ್ತುತ. ಎಂ ಬಿ ಪಾಟೀಲ್ ಯಾಕೆ ಮಾತನಾಡಿದ್ರೋ ನನಗೆ ಗೊತ್ತಿಲ್ಲ. ಹೈಕಮಾಂಡ್ ಇದೆ. ಏನೂ ವಿಚಾರ ಮಾಡ್ತಿದೆ ನೋಡೋಣ ಎಂದು ಗುಂಡೂರಾವ್ ತಿಳಿಸಿದರು.
ಇನ್ನೊಬ್ಬ ಸಚಿವ ಆಕಾಂಕ್ಷಿ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ನಾನು ದೆಹಲಿಗೆ ಹೊರಟಿದ್ದು, ನಾನು ಕೂಡ ಪ್ರಬಲ ಸಚಿವ ಆಕಾಂಕ್ಷಿ ಇದ್ದೇನೆ. ಬಾಗಲಕೋಟೆ ಜಿಲ್ಲೆಗೆ ಹಲವು ವರ್ಷಗಳಿಂದ ಸಚಿವ ಸ್ಥಾನ ಸಿಕ್ಕಿಲ್ಲ. ನಾನು ಲಿಂಗಾಯತ ಸಮಾಜಕ್ಕೆ ಸೇರಿದವನು. ಸಚಿವ ಸ್ಥಾನ ಕೊಡಿ ಎಂದು ಹೈಕಮಾಂಡ್ ಮನವೊಲಿಸಲು ದೆಹಲಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಪೊಲೀಸರಿಗೆ ಸಿಎಂ, ಡಿಸಿಎಂ ಕ್ಲಾಸ್ ಬಗ್ಗೆ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರತಿಕ್ರಿಯೆ ನೀಡಿದರು. ಬೊಮ್ಮಾಯಿಗೆ ಆಡಳಿತ ಮಾಡುವುದೇ ಗೊತ್ತಿಲ್ಲ. ಅವರ ಆಡಳಿತದಲ್ಲಿ ಬರೀ ಭ್ರಷ್ಟಾಚಾರ ಅನ್ಯಾಯಗಳೇ ನಡೆದಿವೆ. ಜನ ಸಾಮಾನ್ಯರು ಪೊಲೀಸ್ ಠಾಣೆಗಳಿಗೆ ಹೋದ್ರೆ ನ್ಯಾಯ ಸಿಗ್ತಿರಲಿಲ್ಲ. ನಾನು ಮಾಜಿ ಶಾಸಕನಾಗಿದ್ರು ಆಗ ನನಗೂ ನ್ಯಾಯ ಸಿಗಲಿಲ್ಲ. ಹೀಗಾಗಿ ಪೊಲೀಸರಿಗೆ ನಮ್ಮ ಸಿಎಂ ಅವರು ಹೇಳಿದ್ದಾರೆ. ಬೊಮ್ಮಾಯಿಗೆ ಮೊದಲು ಅಡ್ಮಿನಿಸ್ಟ್ರೇಶನ್ ಅಂದ್ರೆ ಏನು ಅಂತ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.
ಇದನ್ನೂಓದಿ:ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಯು ಟಿ ಖಾದರ್ ಅವಿರೋಧ ಆಯ್ಕೆ