ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ):ಬ್ರೇಕ್ ಫೆಲ್ ಆದ ಪರಿಣಾಮ ಫುಟ್‌ಪಾತ್ ಮೇಲೆ ನುಗ್ಗಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಪಾದಚಾರಿಗಳಿಗೂ ಯಾವುದೇ ತೊಂದರೆಯಾಗಿಲ್ಲ. ಇದರಿಂದ ಸಂಭವನೀಯ ದುರಂತಯೊಂದು ತಪ್ಪಿದೆ.
ದೊಡ್ಡಬಳ್ಳಾಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಿನ್ನೆ (ಸೋಮವಾರ) ರಾತ್ರಿ ಘಟನೆ ನಡೆದಿದ್ದು, ಹಿಂದೂಪುರದಿಂದ ಬೆಂಗಳೂರಿಗೆ ಬರುತ್ತಿದ್ದ ವೆಂಕಟೇಶ್ವರ ಟ್ರಾವೆಲ್ಸ್ ಬಸ್ ಪ್ರವಾಸಿ ಮಂದಿರದ ಬಳಿ ಫುಟ್‌ಪಾತ್ ಮೇಲೆ ಹರಿದಿದೆ.
ಬ್ರೇಕ್ ಫೇಲ್ ಆಗಿರುವುದು ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಹಲವರ ಜೀವ ಉಳಿದಿದೆ. ಗೌರಿಬಿದನೂರಿನಿಂದ ಬಸ್ ನಿಧಾನವಾಗಿಯೇ ಬಂದಿದೆ. ಟಿ.ಬಿ. ವೃತ್ತದ ಸಿಗ್ನಲ್ ಹಾಕಿದ ವೇಳೆ, ಬಸ್ ನಿಯಂತ್ರಣಕ್ಕೆ ಸಿಗದೇ ಫುಟ್‌ಪಾತ್ ಮೇಲೆ ಹತ್ತಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಕರ್ತವ್ಯದಲ್ಲಿದ್ದ ಚಾಲಕ ಅಸ್ವಸ್ಥ ವಿಭಜಕಕ್ಕೆ ಡಿಕ್ಕಿ ಹೊಡೆದ ಬಸ್( ಬೆಂಗಳೂರೂ) :ಇನ್ನೊಂದು ಕಡೆ ಕರ್ತವ್ಯದಲ್ಲಿದ್ದ ಚಾಲಕ ಅಸ್ವಸ್ಥನಾದ ಪರಿಣಾಮ ಬಿಎಂಟಿಸಿ ಬಸ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ತಡರಾತ್ರಿ ಪ್ಯಾಲೇಸ್ ಗುಟ್ಟಹಳ್ಳಿ ಬಳಿಯ ಮೇಲ್ಸೇತುವೆ ಬಳಿ ಈ ಅವಘಡ ನಡೆದಿದೆ. ಚಾಲಕನಿಗೆ ತಲೆ ಸುತ್ತು ಕಾಣಿಸಿಕೊಂಡ ಪರಿಣಾಮ ನಿಯಂತ್ರಣ ತಪ್ಪಿ ಬಿಎಂಟಿಸಿ ವೋಲ್ವೋ ಬಸ್ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಚ್‍ಎಸ್‍ಆರ್ ಲೇಔಟ್ ಮಾರ್ಗವಾಗಿ ಸಾಗುತ್ತಿದ್ದ ಬಿಎಂಟಿಸಿ ವೋಲ್ವೋ ಬಸ್ ಪ್ಯಾಲೇಸ್ ಗುಟ್ಟಹಳ್ಳಿ ಫ್ಲೈ ಓವರ್ ಬಳಿ ಬಂದಾಗ ಚಾಲಕ ತಲೆ ಸುತ್ತಿನಿಂದ ಅಸ್ವಸ್ಥನಾಗಿದ್ದಾನೆ. ನೋಡ ನೋಡುತ್ತಿದ್ದಂತೆ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಬಸ್ ಪಲ್ಟಿಯಾಗಿದೆ. ಬಸ್ನಲ್ಲಿ 13 ಮಂದಿ ಪ್ರಯಾಣಿಕರಿದ್ದರು. ಘಟನೆಯಿಂದ ಹಲವರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಇತ್ತೀಚಿನ ಪ್ರಕರಣ, ಬಿಎಂಟಿಸಿ ಬಸ್ ಬ್ರೇಕ್ ಫೇಲ್- ಸರಣಿ ಅಪಘಾತ:ಬಿಎಂಟಿಸಿ ಬಸ್ನ ಬ್ರೇಕ್ ಫೇಲ್ ಆಗಿದ್ದರಿಂದ ಸರಣಿ ಅಪಘಾತ ನಡೆದ ಘಟನೆ ನಗರದ ಕಾರ್ಪೋರೇಷನ್ ಸಿಗ್ನಲ್ ಬಳಿ ಇತ್ತೀಚೆಗೆ ಜರುಗಿತ್ತು. ಶಿವಾಜಿನಗರ ಕಡೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್ ಕಾರ್ಪೋರೇಷನ್ ಸಿಗ್ನಲ್ ಹತ್ತಿರ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಎರಡು ಕಾರು ಮತ್ತು ಆಟೋ ಪರಸ್ಪರ ಡಿಕ್ಕಿ ಹೊಡೆದು ಅವಘಡ ಸಂಭವಿಸಿತ್ತು. ಆದರೆ, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಪಘಾತದಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಹಲಸೂರು ಗೇಟ್ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದರು.
ಇದನ್ನೂ ಓದಿ:ಆಗಸದಲ್ಲಿ ನಿಂತ ಮಗುವಿನ ಉಸಿರು.. ಬೆಂಗಳೂರು - ದೆಹಲಿ ವಿಮಾನ ತುರ್ತು ಭೂಸ್ಪರ್ಶ.. ಕಂದಮ್ಮನ ಪಾಲಿಗೆ ದೇವರಾದ ವೈದ್ಯರು..