ದೇವನಹಳ್ಳಿ: ಆ ಕುಟುಂಬಕ್ಕೆ ತಂದೆ ಇಲ್ಲ, ತಾಯಿಯೂ ಇಲ್ಲ. ಮನೆಯ ಸದಸ್ಯರನ್ನು ಆತನೇ ದುಡಿದು ಬದುಕು ಸಾಗಿಸಬೇಕಾದ ಸಂದಿಗ್ಧ ಪರಿಸ್ಥಿತಿ. ಈ ಮಧ್ಯೆ ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿ ಯಾವುದೋ ಸೆಳೆತಕ್ಕೆ ಒಳಗಾಗಿ ಬರ್ಬರವಾಗಿ ಕೊಲೆಗೀಡಾಗಿದ್ದಾನೆ. ಇತ್ತ ಕಣ್ಣೆದುರೇ ತಮ್ಮನ ಸಾವು ಕಂಡಿರುವ ಅಕ್ಕನಿಗೆ ದಿಕ್ಕು ತೋಚದಂತಾಗಿದೆ. ತನ್ನ ತಮ್ಮನನ್ನು ಕೊಂದಿರುವ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗಬೇಕು. ಅವರು ಜೀವನಪರ್ಯಂತ ಜೈಲಿನಲ್ಲಿದ್ದು ಅಲ್ಲೇ ಸಾಯಬೇಕು ಅಂತಾ ಮೃತನ ಅಕ್ಕ ಕೊಲೆ ಆರೋಪಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಜೀವಕ್ಕೆ ಎರವಾದ ಅಕ್ರಮ ಸಂಬಂಧ.. ಹೌದು, ಅನೈತಿಕ ಸಂಬಂಧದ ವಿಚಾರಕ್ಕೆ ಯುವಕನೋರ್ವನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಿಂಗ್ರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರದೀಪ್ (27) ಕೊಲೆಗೀಡಾಗಿರುವ ಯುವಕ. ಅಂದ ಹಾಗೆ, ಇದೇ ಊರಿನ ವೆಂಕಟೇಶ್ ಎಂಬಾತನ ಪತ್ನಿ ಜೊತೆ ಈ ಪ್ರದೀಪ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂಬ ಆರೋಪ ಕೇಳಿಬಂದಿದೆ.
ಮದ್ಯಪಾನ ಮಾಡಿಸಿ ಸಂಚು ರೂಪಿಸಿದರು.. ಇದೇ ವಿಚಾರವಾಗಿ ಬುಧವಾರ ರಾತ್ರಿ ನಿನ್ನ ಬಳಿ ಮಾತನಾಡಬೇಕು ಬಾ ಎಂದು ಆ ಮಹಿಳೆಯ ಪತಿ ವೆಂಕಟೇಶನು ಪ್ರದೀಪನನ್ನು ಕರೆಸಿಕೊಂಡಿದ್ದನಂತೆ. ಗ್ರಾಮದ ಹೊರವಲಯದ ಲೇಔಟ್ ಒಂದರಲ್ಲಿ ವೆಂಕಟೇಶ ಹಾಗೂ ನಾಗೇಶ ಎಂಬುವವರು ಪ್ರದೀಪನಿಗೆ ಚೆನ್ನಾಗಿ ಮದ್ಯಪಾನ ಮಾಡಿಸಿ ಕೈ ಕಾಲುಗಳನ್ನು ಕಟ್ಟಿ ಕೊಚ್ಚಿ ಕೊಲೆ ಮಾಡಿದ್ದಾರೆ. ವೆಂಕಟೇಶ್ ಮತ್ತು ಕೋಳಿ ನಾಗೇಶ್ ಎಂಬುವರು ಮನಬಂದಂತೆ ಕೊಚ್ಚಿ ಎಸ್ಕೇಪ್ ಆಗಿದ್ದಾರೆ. ಕೊಚ್ಚಿದ ನಂತರ ಒಂದು ಕಿಲೋ ಮೀಟರ್ವರೆಗೆ ಪ್ರದೀಪ್ ಓಡೋಡಿ ಬಂದಿದ್ದಾನೆ. ಆದರೂ ಬಿಡದೆ ಅಟ್ಟಾಡಿಸಿಕೊಂಡು ಬಂದು ಕೊಲೆ ಮಾಡಿದ್ದಾರೆ ಪ್ರದೀಪ್ನ ಅಕ್ಕ ಪ್ರೇಮ ಕಣ್ಣೀರು ಹಾಕಿದ್ದಾರೆ.