ದೇವನಹಳ್ಳಿ: ಮಳೆಯಿಂದಾಗಿ ಮನೆಯ ಮೇಲೆ ಕಾಂಪೌಂಡ್ ಕುಸಿದ ಪರಿಣಾಮ ಅಣ್ಣ-ತಂಗಿ ಸಾವನ್ನಪ್ಪಿದ್ದರು. ಮೃತರ ಕುಟುಂಬಕ್ಕೆ ಜಿಲ್ಲಾಡಳಿತದಿಂದ ನೀಡಲಾದ ತಲಾ 5 ಲಕ್ಷ ರೂಪಾಯಿಗಳ ಚೆಕ್ನ್ನು ಸಚಿವ ಎಂಟಿಬಿ ನಾಗರಾಜ್ ಕುಟುಬಂಸ್ಥರಿಗೆ ವಿತರಿಸಿದರು.
ನೆಲಮಂಗಲ ಹೊರವಲಯದ ಭಿನ್ನಮಂಗಲದಲ್ಲಿ ಕಳೆದ ಜುಲೈ 20 ರಂದು ಮಳೆಯಿಂದಾಗಿ ಮನೆಯ ಪಕ್ಕದಲ್ಲಿ ಸಂಗ್ರಹಿಸಲಾಗಿದ್ದ, ಎಂ ಸ್ಯಾಂಡ್ನ ಕಲ್ಲಿನ ಕಾಂಪೌಂಡ್ ಮನೆಯ ಮೇಲೆ ಕುಸಿದ ಪರಿಣಾಮ ಅಣ್ಣ ವೇಣು (22) ಹಾಗೂ ತಂಗಿ ಕಾವ್ಯ (20) ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಶ್ರೀನಿವಾಸ್ ಪರಿಶೀಲನೆ ನಡೆಸಿ ಪರಿಹಾರ ಕೊಡಿಸುವುದಾಗಿ ತಿಳಿಸಿದ್ದರು. ಬಿಎಂಟಿಸಿ ಮಾಜಿ ನಿರ್ದೇಶಕರಾದ ಮಿಲ್ಟ್ರೀ ಮೂರ್ತಿ ಅವರು ಕೂಡ ಪರಿಹಾರ ಕೊಡಿಸುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದ್ದರು.
ಇದನ್ನೂ ಓದಿ : ಸ್ನಾನ ಗೃಹದಲ್ಲಿ ಜಾರಿ ಬಿದ್ದ ಹಿರಿಯ ನಟಿ ಡಾ. ಲೀಲಾವತಿ ಬೆನ್ನುಮೂಳೆಗೆ ಸಣ್ಣ ಪೆಟ್ಟು: ಒಂದು ತಿಂಗಳ ವಿಶ್ರಾಂತಿ
ಜಿಲ್ಲಾಧಿಕಾರಿಗಳು ನೀಡಿದ ಭರವಸೆಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮೃತಪಟ್ಟ ಕಾವ್ಯ ಮತ್ತು ವೇಣು ಅವರ ತಂದೆ ತಾಯಿಗೆ ತಲಾ ರೂ. 5 ಲಕ್ಷ ಪರಿಹಾರದ ಚೆಕ್ನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೋವಿಡ್-19 ಹಾಗೂ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವರಾದ ಎಂಟಿಬಿ ನಾಗರಾಜ್ ವಿತರಿಸಿದರು.