ಬೆಂಗಳೂರು : ಬ್ರಾಂಡ್ ಬೆಂಗಳೂರು ಕಟ್ಟಲು ಸಾರ್ವಜನಿಕರಿಂದ ಸಲಹೆ ಸೂಚನೆಯನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೋರಿದ್ದಾರೆ. ಈ ಸಂಬಂಧ ಇಂದು ವಿಕಾಸಸೌಧದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಬೆಂಗಳೂರು ಅಭಿವೃದ್ಧಿ ಸಂಬಂಧ ಜನರು ತಮ್ಮ ಸಲಹೆಗಳನ್ನ ಹೇಗೆ ನೀಡೋದು ಅನ್ನುವುದರ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್ ಭಾಗಿಯಾಗಿದ್ದರು.
ಇದೇ ಸಂದರ್ಭ ಮಾತನಾಡಿದ ಡಿಕೆಶಿ, ನನಗೆ ಬೆಂಗಳೂರು ಅಭಿವೃದ್ಧಿ ಹಾಗೂ ನೀರಾವರಿ ಖಾತೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ 1 ಕೋಟಿ 60 ಲಕ್ಷ ಜನಸಂಖ್ಯೆ ಇದೆ. 50 ಲಕ್ಷದಷ್ಟು ಜನ ದಿನ ಬಂದು ಹೋಗ್ತಾರೆ. ಬೆಂಗಳೂರಿನಿಂದಲೇ ರಾಜ್ಯದ ಬೊಕ್ಕಸಕ್ಕೆ ಹಣ ಬರ್ತಾ ಇದೆ. ಇಲ್ಲಿನ ವಾತಾವರಣ ನೋಡಿ ಜನ ಹೆಚ್ಚು ಇಲ್ಲಿ ವಾಸ ಮಾಡಲು ಇಷ್ಟಾ ಪಡ್ತಾ ಇದ್ದಾರೆ ಎಂದರು.
ಸಿಎಂ ಅಧ್ಯಯನ ಮಾಡ್ತಾ ಇದ್ದಾರೆ:ಬಜೆಟ್ನಲ್ಲಿ ಬೆಂಗಳೂರಿಗೆ ಏನು ಕೊಡಬೇಕು ಅಂತ ಸಿಎಂ ಅಧ್ಯಯನ ಮಾಡ್ತಾ ಇದ್ದಾರೆ. ಅದನ್ನ ಅವರೇ ಘೋಷಣೆ ಮಾಡ್ತಾರೆ. ಕಳೆದ ಸಭೆಯಲ್ಲಿ ಬೆಂಗಳೂರಿನ ಸಾಕಷ್ಟು ಪ್ರಮುಖರು ಹಲವು ಪ್ರಮುಖ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಅವರೆಲ್ಲಾ ಬ್ಯುಸಿನೆಸ್ ಮೆನ್, ದೊಡ್ಡ ದೊಡ್ಡ ವ್ಯಕ್ತಿಗಳು. ಅವರ ಸಲಹೆಗಳ ಜೊತೆಗೆ ಸಾಮಾನ್ಯ ಜನರ ಸಲಹೆಗಳನ್ನು ನಾವು ಕೇಳುತ್ತೇವೆ. ನಾನು ಮಾಜಿ ಸಿಎಂ ಬೊಮ್ಮಾಯಿ ಅವರ ಸಲಹೆಯನ್ನು ಕೇಳುತ್ತೇವೆ. ಅವರ ಭೇಟಿಗೆ ಸಮಯ ಕೇಳಿದ್ದೆ. ಅವರು ಸದ್ಯ ಬ್ಯುಸಿ ಇದ್ದಾರೆ. ಸದ್ಯದಲ್ಲೇ ಅವರು ಸೇರಿದಂತೆ ಇನ್ನೂ ಹಲವು ಪ್ರಮುಖರನ್ನೂ ಭೇಟಿ ಮಾಡುತ್ತೇನೆ. ಸಲಹೆ ಪಡೆಯುತ್ತೇನೆ ಎಂದು ವಿವರಿಸಿದರು.
ನಾನು ಖುದ್ದು ನೋಡಿದ್ದೇನೆ. ನಗರದಲ್ಲಿ ಫುಟ್ಪಾತ್ ಒತ್ತುವರಿಯಾಗಿದೆ. ಫುಟ್ಪಾತ್ ನಲ್ಲೇ ಸಾಕಷ್ಟು ಅಂಗಡಿಗಳನ್ನ ಇಟ್ಟುಕೊಂಡಿದ್ದಾರೆ. ಇದರಿಂದ ಜನರು ರಸ್ತೆಗಳಲ್ಲಿ ಓಡಾಟ ಮಾಡುತ್ತಾರೆ. ಹೀಗಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತೆ. ಟ್ರಾಫಿಕ್ ಬಗ್ಗೆ ಕೆಲಸ ಮಾಡಿರುವ ಅಧಿಕಾರಿಗಳು, ತಜ್ಞರ ಸಲಹೆ ಕೂಡ ಪಡೆಯುತ್ತೇವೆ. ನಾನಾ ವಿಧದ ಟನಲ್ ಮಾಡಲು ಸಾಕಷ್ಟು ಸಲಹೆಗಳು ಬಂದಿವೆ. ನನಗೆ ಸಾರ್ವಜನಿಕರ ಸಲಹೆಗಳು ಬೇಕು. ಅದಕ್ಕಾಗಿಯೇ www.brandbengaluru.karnataka.gov.in ವೆಬ್ ಸೈಟ್ ಆರಂಭಿಸಿದ್ದೇವೆ. ಇದರಲ್ಲಿ ಜನರು ಸಲಹೆ ನೀಡಬಹುದು. ನಾನು ಎಲ್ಲರನ್ನು ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ಎಲ್ಲರೂ ಸಲಹೆ ಹಾಗೂ ಅಭಿಪ್ರಾಯ ನೀಡಿ ಎಂದು ಮನವಿ ಮಾಡಿದರು.