ದೊಡ್ಡಬಳ್ಳಾಪುರ (ಬೆಂ.ಗ್ರಾ): ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ ಸರಳವಾಗಿ ನೆರವೇರಿತು. ಕೋವಿಡ್ -19 ಹಿನ್ನೆಲೆ ದೇವಸ್ಥಾನದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪ್ರಾಂಗಣದಲ್ಲಿ ಸಾಂಕೇತಿಕ ಬ್ರಹ್ಮರಥೋತ್ಸವ ನಡೆಸಲಾಯಿತು.
ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಸರಳವಾಗಿ ನೆರವೇರಿದ ಬ್ರಹ್ಮರಥೋತ್ಸವ ಪ್ರತಿವರ್ಷದಂತೆ ಪುಷ್ಯ ಷಷ್ಠಿಯ ದಿನದಂದು ಕ್ಷೇತ್ರದಲ್ಲಿ ಸುಬ್ರಹ್ಮಣ್ಯಸ್ವಾಮಿಯ ಬ್ರಹ್ಮರಥೋತ್ಸವ ನಡೆಯುತ್ತದೆ. ಪ್ರತಿ ವರ್ಷವೂ ಅದ್ಧೂರಿಯಿಂದ ನಡೆಯುತ್ತಿದ್ದ ಬ್ರಹ್ಮರಥೋತ್ಸವ ಈ ಬಾರಿ ಸರಳವಾಗಿ ನೆರವೇರಿದೆ. ಮುಂಜಾನೆ 4 ಗಂಟೆಯಿಂದ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಲಕ್ಷ್ಮೀನರಸಿಂಹ ವಿಷ್ಣುರೂಪಿಯಾಗಿ ಪ್ರತ್ಯಕ್ಷನಾಗಿದ್ದನೆಂಬ ನಂಬಿಕೆ..!
ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ 600 ವರ್ಷಗಳ ಇತಿಹಾಸವಿದೆ, ಸರ್ಪಗಳ ಸಂಖ್ಯೆ ಕ್ಷೀಣಿಸುತ್ತಿದ್ದ ವೇಳೆ ಸರ್ಪರೂಪಿಯಾಗಿ ಸುಬ್ರಹ್ಮಣ್ಯ ಈ ಕ್ಷೇತ್ರದಲ್ಲಿ ತಪಸ್ಸು ಮಾಡುತ್ತಾನೆ. ಲಕ್ಷ್ಮೀನರಸಿಂಹ ವಿಷ್ಣುರೂಪಿಯಾಗಿ ಪ್ರತ್ಯಕ್ಷನಾಗಿ ಸರ್ಪ ವಂಶಕ್ಕೆ ರಕ್ಷಣೆ ನೀಡುವುದಾಗಿ ಅಭಯ ನೀಡುತ್ತಾನೆ ಎಂಬ ಇತಿಹಾಸವಿದೆ.
ದೇವಸ್ಥಾನದ ಮೂಲ ವಿಗ್ರಹ ಸಾಲಿಗ್ರಾಮದ ಏಕಶಿಲೆಯಲ್ಲಿ ಲಕ್ಷ್ಮೀನರಸಿಂಹ ಮತ್ತು ಸುಬ್ರಹ್ಮಣ್ಯಸ್ವಾಮಿ ವಿಗ್ರಹ ಇರುವುದು ವಿಶೇಷ. ಪೂರ್ವಾಭಿಮುಖವಾಗಿ ಸುಬ್ರಹ್ಮಣ್ಯ ಮತ್ತು ಪಶ್ಚಿಮಾಭಿಮುಖವಾಗಿ ಲಕ್ಷ್ಮೀನರಸಿಂಹ ಸ್ವಾಮಿ ವಿಗ್ರಹ ಉದ್ಭವವಾಗಿದೆ. ಸುಬ್ರಹ್ಮಣ್ಯ ಸ್ವಾಮಿಯ ಬೆನ್ನಿನ ಮೇಲೆ ಲಕ್ಷ್ಮೀನರಸಿಂಹ ಕೆತ್ತನೆ ಇರುವುದು ಇನ್ನೊಂದು ವಿಶೇಷವಾಗಿದೆ.
ಇದನ್ನೂ ಓದಿ: ಉಡುಪಿಯಿಂದ ವಾಪಸಾದ ಸಿಎಂ: ಗೃಹ ಕಚೇರಿ ಕೃಷ್ಣಾದಲ್ಲಿ ಸರಣಿ ಸಭೆ