ಕರ್ನಾಟಕ

karnataka

ETV Bharat / state

ಜಾತ್ರೆಯಲ್ಲಿ ಏರ್​ ಬಲೂನ್​ ಜಂಪಿಂಗ್​ ಆಡುತ್ತಿದ್ದ ಬಾಲಕ ಹೃದಯಾಘಾತದಿಂದ ಸಾವು!

ಜಾತ್ರೆಯಲ್ಲಿ ಹಾಕಲಾಗಿದ್ದ ಏರ್​ ಬಲೂನ್​ ಜಂಪಿಂಗ್ ಆಟದ​ ವೇಳೆ ಬಾಲಕನೊಬ್ಬ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ. ದೊಡ್ಡಬಳ್ಳಾಪುರದಲ್ಲಿ ಘಟನೆ ನಡೆದಿದೆ.

ಏರ್​ ಬಲೂನ್​ ಜಂಪಿಂಗ್​ ಆಡುತ್ತಿದ್ದಾಗ ಬಾಲಕನಿಗೆ ಹೃದಯಾಘಾತ
ಏರ್​ ಬಲೂನ್​ ಜಂಪಿಂಗ್​ ಆಡುತ್ತಿದ್ದಾಗ ಬಾಲಕನಿಗೆ ಹೃದಯಾಘಾತ

By

Published : May 25, 2023, 10:12 AM IST

Updated : May 25, 2023, 12:32 PM IST

ಮೃತ ಬಾಲಕ ದೊಡ್ಡಪ್ಪನ ನೋವಿನ ಮಾತುಗಳು

ದೊಡ್ಡಬಳ್ಳಾಪುರ:ಇಲ್ಲಿನ ಮುತ್ಯಾಲಮ್ಮ ಜಾತ್ರೆಯಲ್ಲಿ ಏರ್​ ಬಲೂನ್​ ಜಂಪಿಂಗ್​​ ಆಟವಾಡುತ್ತಿದ್ದ ಬಾಲಕ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ನಡೆಯಿತು. ಬಾಲಕನ ಸಾವಿನಿಂದಾಗಿ ಜಾತ್ರೆಯ ಆಯೋಜಕರ ಮೇಲೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೊಡ್ಡಬಳ್ಳಾಪುರದ ಶಾಂತಿನಗರದ ನಿವಾಸಿ ಮಂಜುನಾಥ್ ಎಂಬವರ ಪುತ್ರ 11 ವರ್ಷದ ಶ್ರೇಯಸ್​ ಮೃತ ಬಾಲಕ. ಮಂಜುನಾಥ್​ ಅವರು ಚಿಕ್ಕ ಕುರುಕಲು ಅಂಗಡಿ ನಡೆಸುತ್ತಿದ್ದಾರೆ. ಶ್ರೇಯಸ್​ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ನಿನ್ನೆ ರಾತ್ರಿ ತನ್ನ ತಾಯಿ ಜೊತೆಗೆ ಎರಡು ದಿನಗಳಿಂದ ಇಲ್ಲಿ ನಡೆಯುತ್ತಿರುವ ಜಾತ್ರೆಗೆ ಹೋಗಿದ್ದ.

ಜಾತ್ರೆಯಲ್ಲಿ ಮಕ್ಕಳ ಮನೋರಂಜನೆಗಾಗಿ ಹಾಕಲಾಗಿರುವ ವಿವಿಧ ಆಟಗಳಲ್ಲಿ ತೊಡಗಿದ್ದ. ಏರ್​ ಬಲೂನ್​ ಜಂಪಿಂಗ್​ ಮಾಡುತ್ತಿದ್ದಾಗ ಶ್ರೇಯಸ್​ಗೆ ಹೃದಯಾಘಾತವಾಗಿದೆ. ನಿತ್ರಾಣಗೊಂಡು ಅಲ್ಲಿಯೇ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಾಬರಿಗೊಂಡ ತಾಯಿ ಮತ್ತು ಜನರು ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅದಾಗಲೇ ಪ್ರಾಣಪಕ್ಷಿ ಹಾರಿ ಹೋಗಿದ್ದನ್ನು ವೈದ್ಯರು ತಿಳಿಸಿದ್ದಾರೆ.

ಆಯೋಜಕರ ಮೇಲೆ ಪೋಷಕರ ಆರೋಪ:ದೊಡ್ಡಬಳ್ಳಾಪುರ ನಗರ ದೇವತೆಯಾದ ಮುತ್ಯಾಲಮ್ಮ ದೇವಿ ಜಾತ್ರೆ ಪ್ರತಿ ವರ್ಷದಂತೆ ಕಳೆದ 2 ದಿನಗಳಿಂದ ಅದ್ಧೂರಿಯಾಗಿ ಜರುಗುತ್ತಿದೆ. ಜಾತ್ರೆಯಲ್ಲಿ ಮನೋರಂಜನೆಗಾಗಿ ಹಲವು ವಿಧದ ಆಟಗಳನ್ನು ಹಾಕಲಾಗಿದೆ. ಏರ್​ ಬಲೂನ್​ ಜಂಪಿಂಗ್​ ವೇಳೆ ಬಾಲಕ ಮೃತಪಟ್ಟಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

"ಜಾತ್ರಾ ಸ್ಥಳದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಸಾವಿರಾರು ಜನ ಸೇರುವ ಜಾತ್ರೆಯಲ್ಲಿ ಆಂಬ್ಯುಲೆನ್ಸ್​​ ವ್ಯವಸ್ಥೆಯನ್ನ ಅಯೋಜಕರು ಮಾಡಿಲ್ಲ. ಸೂಕ್ತ ಸಮಯದಲ್ಲಿ ಪ್ರಥಮ ಚಿಕಿತ್ಸೆ ಸಿಗದ ಹಿನ್ನೆಲೆ ನಮ್ಮ ಪುತ್ರ ಸಾವನ್ನಪ್ಪಿದ್ದಾನೆ" ಎಂದು ಪೋಷಕರು ಆರೋಪ ಮಾಡಿದ್ದಾರೆ.

"ಜಾತ್ರಾ ಸೇವಾ ಸಮಿತಿಯ ನಿರ್ಲಕ್ಷ್ಯವೇ ತಮ್ಮ ಮಗನ ಸಾವಿಗೆ ಕಾರಣ. ಆಂಬ್ಯುಲೆನ್ಸ್​ ಮತ್ತು ಅಗ್ನಿಶಾಮಕ ದಳವನ್ನು ನಿಯೋಜನೆ ಮಾಡಬೇಕಿತ್ತು. ಘಟನೆ ನಡೆದ ತಕ್ಷಣವೇ ಬಾಲಕನಿಗೆ ಪ್ರಥಮ ಚಿಕಿತ್ಸೆ ಸಿಕ್ಕಿದ್ದರೆ ಆತ ಬದುಕುಳಿಯುವ ಸಾಧ್ಯತೆ ಇತ್ತು. ಜಾತ್ರೆಯ ಆಯೋಜಕರು ಕೇವಲ ಹಣದ ಆಸೆಗಾಗಿ ವಿವಿಧ ಆಟಗಳಿಗೆ ಅನುಮತಿ ನೀಡಿದ್ದಾರೆ, ವಿನಹಃ ಜನರ ರಕ್ಷಣೆಗೆ ಯಾವುದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿಲ್ಲ" ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿನ ಕಹಿ ಘಟನೆ:15 ವರ್ಷಗಳ ಹಿಂದೆ ಇದೇ ಮುತ್ಯಾಲಮ್ಮ ಜಾತ್ರೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿತ್ತು. ದೇವರ ಉತ್ಸವ ಮಾಡುವ ಕುರ್ಜುಗಳಿಗೆ ವಿದ್ಯುತ್ ತಗುಲಿ ಎರಡು ಎತ್ತುಗಳು ಸಾವನ್ನಪ್ಪಿದ್ದವು. ದುರ್ಘಟನೆಗಳು ನಡೆದಿದ್ದರೂ ಜಾತ್ರಾ ಸಮಿತಿಯವರು ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಟ್ಟಡದಿಂದ ಜಿಗಿದ ಯುವಕ:ಕೇಸ್​ವೊಂದರಲ್ಲಿ ತನ್ನನ್ನು ಬಂಧಿಸುತ್ತಾರೆ ಎಂದು ಪೊಲೀಸರನ್ನು ಕಂಡ ಯುವಕ ತಪ್ಪಿಸಿಕೊಳ್ಳುವ ವೇಳೆ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೊಹಮ್ಮದ್ ಹುಸೇನ್ (31) ಮೃತ ಯುವಕ. ಈತನ ವಿರುದ್ಧ ಯುವತಿಗೆ ಬೆದರಿಕೆ ಹಾಕಿದ ಆರೋಪವಿತ್ತು. ಆಕೆಯ ಪೋಷಕರು ನೀಡಿದ ದೂರಿನನ್ವಯ ಯುವಕನ ಬಳಿಗೆ ಬಂದಿದ್ದ ಪೊಲೀಸರನ್ನು ಕಂಡು ಆತ ಮನೆಯ ನಾಲ್ಕನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಯುವತಿಗೆ ಕಿರುಕುಳ: ಪೊಲೀಸರಿಂದ ತಪ್ಪಿಸಿಕೊಳ್ಳಲು 4ನೇ ಮಹಡಿಯಿಂದ ಜಿಗಿದ ಯುವಕ!

Last Updated : May 25, 2023, 12:32 PM IST

ABOUT THE AUTHOR

...view details