ದೊಡ್ಡಬಳ್ಳಾಪುರ:ಹುಟ್ಟಿದ ದಿನದಿಂದ ಪ್ರಪಂಚ ನೋಡದ ಅಂಧ ಹುಡುಗಿ. ಇತ್ತ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆದರೆ, ಆಕೆಯ ವಿದ್ಯಾಭ್ಯಾಸಕ್ಕೆ ತನ್ನ ಅಂಧತ್ವವಾಗಲಿ, ಮನೆಯ ಬಡತನವಾಗಲಿ ಅಡ್ಡಿಯಾಗಲಿಲ್ಲ. ಅಂಧರ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಆಕೆ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 513 ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ.
ಅಂಧತ್ವ, ಬಡತನ ಈಕೆಗೆ ಅಡ್ಡಿಯಾಗಲಿಲ್ಲ.... ಸ್ವಾವಲಂಬಿ ಜೀವನ ಈಕೆಯ ಕನಸು.. - doddaballapur palyada government school
ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆಯ ಅಂಧ ವಿದ್ಯಾರ್ಥಿನಿ ಪುಷ್ಪ ಕಣ್ಣು ಕಾಣದಿದ್ದರೂ ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 513 ಅಂಕ ಗಳಿಸಿ ಸೈ ಎನಿಸಿಕೊಂಡಿದ್ದಾಳೆ.

ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆಯ ವೆಂಕಟರಮಣಪ್ಪ ಮತ್ತು ನರಸಮ್ಮ ದಂಪತಿಯ ಮಗಳಾದ ಪುಷ್ಪ ಕಣ್ಣು ಕಾಣದಿದ್ದರೂ ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ಗಾರೆ ಕೆಲಸ ಮಾಡುವ ಅಪ್ಪನ ದುಡಿಮೆ ಊಟಕ್ಕೆ ಸಾಲುತ್ತಿರಲಿಲ್ಲ. ಈಕೆಗೆ ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದು, ಕಿರಿಯ ಅಕ್ಕನಿಗೂ ಒಂದು ಕಣ್ಣು ಕಾಣಿಸುವುದಿಲ್ಲ. ಕಡು ಬಡತನದಲ್ಲಿ ಬೆಳೆದ ಹುಡುಗಿ ಪುಷ್ಪಳ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಇದರ ನಡುವೆ ಕಣ್ಣು ಕಾಣಿಸದಿರುವುದಿಂದ ತಾನೂ ಕುಟುಂಬಕ್ಕೆ ಭಾರವಾಗುತ್ತೇನೆಂಬ ಭಯ ಇತ್ತು. ಕುಟುಂಬಕ್ಕೆ ತಾನು ಹೊರೆಯಾಗಬಾರದೆನ್ನುವ ಕಾರಣಕ್ಕೆ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತುಕೊಟ್ಟಳು.
ಪುಷ್ಪ ಪ್ರಾಥಮಿಕ ಶಾಲೆಯನ್ನು ದೊಡ್ಡಬಳ್ಳಾಪುರ ನಗರದ ಕಚೇರಿ ಪಾಳ್ಯದ ಸರ್ಕಾರಿ ಶಾಲೆಯಲ್ಲಿ ಮುಗಿಸಿ ನಂತರ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಶಿಡ್ಲಘಟ್ಟದ ಅಂಧರ ವಸತಿ ಶಾಲೆಯಲ್ಲಿ ಮಾಡಿದ್ದಾಳೆ. ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪುಷ್ಪ 625 ಅಂಕಗಳಿಗೆ 513 ಅಂಕ ಗಳಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ಕನ್ನಡ - 105, ಇಂಗ್ಲಿಷ್- 66, ಹಿಂದಿ-100, ಅರ್ಥಶಾಸ್ತ್ರ- 89, ರಾಜ್ಯಶಾಸ್ತ್ರ- 85, ಸಮಾಜ ವಿಜ್ಞಾನ- 68 ಅಂಕಗಳನ್ನ ಪಡೆದಿದ್ದಾಳೆ. ಮುಂದೆ ಉನ್ನತ ವಿದ್ಯಾಭ್ಯಾಸ ಮಾಡಿ ಸ್ವಾವಲಂಬನೆ ಜೀವನ ಮಾಡುವ ಆಸೆ ಈಕೆಗೆ. ಆದರೆ, ಮನೆಯಲ್ಲಿನ ಬಡತನ ಆಕೆಯ ಮುಂದಿನ ವಿದ್ಯಾಭ್ಯಾಸಕ್ಕೆ ದೊಡ್ಡ ಸವಾಲಾಗಿದೆ. ಆಕೆಯ ವಿದ್ಯಾಭ್ಯಾಸಕ್ಕೆ ನೆರವಾಗಲು ದಾನಿಗಳ ಸಹಾಯ ಅಗತ್ಯವಿದ್ದು, ಆಸಕ್ತಿ ಇದ್ದವರು ಈ ಮೊಬೈಲ್ ಸಂಖ್ಯೆಗೆ- 9753081041 ಕರೆ ಮಾಡಬಹುದು.