ಹೊಸಕೋಟೆ (ಬೆಂಗಳೂರು ಗ್ರಾಮಾಂತರ) :ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ನಂತರ ರಾಜ್ಯದಲ್ಲಿ ಕಾಂಗ್ರೆಸ್ನಿಂದ ಗೂಂಡಾಗಿರಿ ರಾಜಕಾರಣ ಪ್ರಾರಂಭವಾಗಿದೆ. ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಚುನಾವಣೆಯ ಫಲಿತಾಂಶದ ಪ್ರಕಟವಾದ ನಾಲ್ಕೇ ತಾಸಿನಲ್ಲಿ ಮನೆ ಮುಂದೆ ಪಟಾಕಿ ಹೊಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ, ಹೊಸಕೋಟೆಯ ಡಿ.ಶೆಟ್ಟಿಹಳ್ಳಿಯಲ್ಲಿ ಕೃಷ್ಣಪ್ಪ ಎಂಬ ವ್ಯಕ್ತಿಯ ಕೊಲೆ ಮಾಡಲಾಗಿತ್ತು. ಮೃತ ಕೃಷ್ಣಪ್ಪರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಿಜೆಪಿ ಪಕ್ಷದ ಮುಖಂಡರು ಅವರ ಮನೆಗೆ ಭೇಟಿ ನೀಡಿದರು. ಭೇಟಿಯ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಅಶ್ವತ್ಥ್ ನಾರಾಯಣ್ ಹಾಗೂ ಈಶ್ವರಪ್ಪ, ಮಾಜಿ ಸಚಿವ ಭೈರತಿ ಬಸವರಾಜ್ ಮತ್ತು ಎಂಟಿಬಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಚುನಾವಣೆ ಫಲಿತಾಂಶ ಬಂದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ನವರು ಗೂಂಡಾಗಿರಿ ರಾಜಕಾರಣ ಪ್ರಾರಂಭಿಸಿದ್ದಾರೆ. ದ್ವೇಷ ರಾಜಕಾರಣ ಶುರುವಾಗಿದೆ. ಹೊಸಕೋಟೆಯನ್ನು ಮಿನಿ ಬಿಹಾರ ಮಾಡುವ ಕೆಲಸ ನಡೆಯುತ್ತಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಹಲ್ಲೆಗಳು, ಕೊಲೆಗಳು, ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಚುನಾವಣಾ ಫಲಿತಾಂಶ ಪ್ರಕಟವಾದ ದಿನ ಮನೆ ಮುಂದೆ ಪಟಾಕಿ ಹೊಡೆಯುವ ವಿಚಾರಕ್ಕೆ ಡಿ.ಶೆಟ್ಟಿಹಳ್ಳಿ ಗ್ರಾಮದಲ್ಲಿ ನಮ್ಮ ಪಕ್ಷದ ಕಾರ್ಯಕರ್ತ ಕೃಷ್ಣಪ್ಪ ಎಂಬವರ ಕೊಲೆ ಮಾಡಲಾಗಿದೆ. ಅಲ್ಲದೆ ಈ ವೇಳೆ ಜಗಳ ಬಿಡಿಸಲು ಹೋದ ಮಗನ ಮೇಲೆ ಹಾಗೂ ಅವರ ಕೃಷ್ಣಪ್ಪ ಅವರ ಪತ್ನಿ ಮೇಲೂ ಹಲ್ಲೆ ನಡೆಸಲಾಗಿದೆ. ಇದನ್ನು ಭಾರತೀಯ ಜನತಾ ಪಕ್ಷ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದರು.