ಹೊಸಕೋಟೆ: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹಾಗಾಗಿ ಪಕ್ಷಗಳು, ಎಂಎಲ್ಗಳು ಮತದಾರರನ್ನು ಸೆಳೆಯಲು ಈಗಿನಿಂದಲೇ ಕಸರತ್ತು ಆರಂಭಿಸಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಸಚಿವ ಎಂಟಿಬಿ ನಾಗರಾಜ್ ಕವ್ವಾಲಿ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದಿದ್ದಾರೆ.
ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಕವ್ವಾಲಿ ಕಾರ್ಯಕ್ರಮಕ್ಕೆ ಬಂದ ಸಚಿವರು ಹಾಗೂ ಎಂಟಿಬಿ ಮಗ ನಿತಿನ್ ಪುರುಷೋತ್ತಮ್ ತಲೆ ಮೇಲೆ ಟೋಪಿ ಹಾಕಿಕೊಂಡು ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಸಾವಿರಾರು ಜನ ಅನ್ಯ ಸಮುದಾಯದ ಜನರು ಭಾಗಿಯಾಗಿದ್ದು, ಮಧ್ಯರಾತ್ರಿವರೆಗೂ ಸಚಿವ ಎಂಟಿಬಿ ನಾಗರಾಜ್ ಕಾರ್ಯಕ್ರಮದಲ್ಲಿಯೇ ಇದ್ದರು. ಜತೆಗೆ ಉರ್ದು ಭಾಷೆಯಲ್ಲೆ ಭಾಷಣ ಆರಂಭಿಸಿದ ಸಚಿವ ಎಂಟಿಬಿ ಮುಸ್ಲಿಂ ಸಮುದಾಯವನ್ನು ಒಲೈಸುವ ಮಾತುಗಳನ್ನು ಆಡಿದ್ದಾರೆ.
ಕಾರ್ಯಕ್ರಮ ಆರಂಭದಿಂದ ಕೊನೆಯವರೆಗೂ ಟೋಪಿ ಹಾಕಿಕೊಂಡೇ ಸಚಿವ ಮತ್ತು ಅವರ ಮಗ ಕುಳಿತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಇನ್ನೂ ಇದೇ ಕವ್ವಾಲಿ ಕಾರ್ಯಕ್ರಮದಲ್ಲಿ ಅಭಿಮಾನಿಗಳು, ಸಚಿವರ ಪುತ್ರ ಮತ್ತು ಕವ್ವಾಲಿ ಗಾಯಕನಿಗೆ ನೋಟುಗಳಿಂದ ದೃಷ್ಟಿ ತೆಗೆದು ಅವರ ತಲೆ ಮೇಲೆ ಸುರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ- ವಿರೋಧದ ಚರ್ಚೆ ನಡೆಯುವಂತೆ ಮಾಡಿದೆ.
ನಾ ನಾಯಕಿ ಕಾರ್ಯಕ್ರಮ ವೋಟಿಗಾಗಿ ಗಿಮಿಕ್ - ಮಂಗಳ ಸೋಮಶೇಖರ್ ಟೀಕೆ(ಮೈಸೂರು): ಕಾಂಗ್ರೆಸ್‌ನವರು ಚುನಾವಣೆ ಗಿಮಿಕ್‌ಗಾಗಿ ಮಹಿಳೆಯರಿಗೆ 2 ಸಾವಿರ ನೀಡುವ ಯೋಜನೆ ಘೋಷಣೆ ಮಾಡಿದ್ಧಾರೆ ಎಂದು ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ಮಂಗಳ ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ದೂರಿದ್ದಾರೆ. ಬೆಂಗಳೂರಿನಲ್ಲಿ ನಡೆದ ನಾ ನಾಯಕಿ ಸಮಾವೇಶದಲ್ಲಿ ಕಾಂಗ್ರೆಸ್‌ನವರು, ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ನೀಡುವ ಘೋಷಣೆ ಮಾಡಿರುವುದು ಮಹಿಳೆಯರ ಮೂಗಿಗೆ ತುಪ್ಪ ಸವರುವ ಕೆಲಸವೇ ಹೊರತು ಬೇರೇನೂ ಅಲ್ಲ. ಮಹಿಳೆಯರಿಗೆ ಬಿಜೆಪಿ ಏನೂ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಆದರೆ, ಮಹಿಳಾ ಪರ ಯೋಜನೆಗಳನ್ನು ಜಾರಿ ಮಾಡಿದ್ದೇ ಬಿಜೆಪಿ ಎಂದರು.