ದೊಡ್ಡಬಳ್ಳಾಪುರ:ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಆಯೋಜನೆಗೊಂಡಿದ್ದ ರಾಜ್ಯ ಸರ್ಕಾರದ ಜನೋತ್ಸವ ಕಾರ್ಯಕ್ರಮ ದಿಢೀರ್ ರದ್ದಾಗಿದೆ. ಹೀಗಾಗಿ ಸಮಾವೇಶಕ್ಕೆ ಬರುವ ಜನರಿಗೆ ಸಿದ್ಧಗೊಳಿಸಿದ್ದ ಅಡುಗೆಯನ್ನು ಶಾಲೆ ಮತ್ತು ಹಾಸ್ಟೆಲ್ಗಳಿಗೆ ವಿತರಣೆ ಮಾಡಲಾಗುತ್ತಿದೆ.
ರಾಜ್ಯ ಬಿಜೆಪಿ ಸರ್ಕಾರದ ಆಡಳಿತಕ್ಕೆ ಮೂರು ವರ್ಷ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಕಾರಣ ದೊಡ್ಡಬಳ್ಳಾಪುರದ ತಮ್ಮಶೆಟ್ಟಿಹಳ್ಳಿಯಲ್ಲಿ ಬೃಹತ್ ಜನೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ಮಂಗಳವಾರ ರಾತ್ರಿ ಪ್ರವೀಣ್ ಹತ್ಯೆಯಾದ ಬಳಿಕ ನಿನ್ನೆ ಸುಳ್ಯ ಸೇರಿದಂತೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಪಕ್ಷದ ಕಾರ್ಯಕರ್ತರು ಶೋಕದಲ್ಲಿರುವಾಗ ಸರ್ಕಾರದ ಸಂಭ್ರಮಾಚರಣೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಕೇಳಿಬಂದಿತ್ತು. ಕಾರ್ಯಕರ್ತರ ಅಕ್ರೋಶ ಮನಗಂಡ ಮುಖ್ಯಮಂತ್ರಿಗಳು ಬುಧವಾರ ಮಧ್ಯರಾತ್ರಿ ಕಾರ್ಯಕ್ರಮ ರದ್ದುಪಡಿಸಿದ್ದರು.
ಸಾಧನಾ ಸಮಾವೇಶ ದಿಢೀರ್ ರದ್ದು: ಮೊಸರನ್ನ, ಬಾದುಷಾ, ಪಲಾವ್ ಶಾಲೆ-ಹಾಸ್ಟೆಲ್ಗೆ ವಿತರಣೆ ಸರ್ಕಾರದ ಜನೋತ್ಸವ ಕಾರ್ಯಕ್ರಮಕ್ಕಾಗಿ ಕಳೆದ 10 ದಿನಗಳಿಂದ ತಯಾರಿ ನಡೆದಿತ್ತು. ಬೃಹತ್ ವೇದಿಕೆ ನಿರ್ಮಾಣ ಸೇರಿದಂತೆ ರಸ್ತೆ ಅಂಚಿನಲ್ಲಿ ಫ್ಲೆಕ್ಸ್ಗಳು, ಬಿಜೆಪಿ ಮುಖಂಡರ ಎತ್ತರದ ಕಟೌಟ್ಗಳನ್ನು ನಿಲ್ಲಿಸಲಾಗಿತ್ತು. ಜೊತೆಗೆ ಕಾರ್ಯಕ್ರಮಕ್ಕೆ ಬರುವ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅಡುಗೆ ಸಿದ್ಧತೆ ಸಹ ಮಾಡಲಾಗಿತ್ತು. ಒಂದು ಲಕ್ಷ ಜನರಿಗೆ ಬೇಕಾಗುವಷ್ಟು ಮೊಸರನ್ನಕ್ಕಾಗಿ ಮೊಸರು, ಬಾದುಷಾ ಸಹ ತಯಾರಿ ಮಾಡಲಾಗಿತ್ತು. ಹಾಗೆಯೇ ಪಲಾವ್ ಮಾಡಲು ಕೂಡ ಸಿದ್ಧತೆ ನಡೆದಿತ್ತು.
ಆದರೆ, ಕಾರ್ಯಕ್ರಮ ದಿಢೀರ್ ರದ್ದಾದ ಕಾರಣ ಸರ್ಕಾರದ ಅನುಮತಿಯೊಂದಿಗೆ ಶಾಲೆ ಮತ್ತು ಹಾಸ್ಟೆಲ್ಗಳಿಗೆ ವಿತರಣೆ ಮಾಡಲಾಗುತ್ತಿದೆ. ಬಂದೋಬಸ್ತ್ ವ್ಯವಸ್ಥೆಗಾಗಿ ನಿಯೋಜನೆ ಮಾಡಲಾಗಿದ್ದ ಪೊಲೀಸರು ರಾತ್ರಿಯೇ ತಮ್ಮ ಊರುಗಳಿಗೆ ಮರಳಿದ್ದಾರೆ. ಜನೋತ್ಸವ ವೇದಿಕೆ ಜನರಿಲ್ಲದೆ ಬಿಕೋ ಎನ್ನುತ್ತಿದೆ.
ಇದನ್ನೂ ಓದಿ:ಬಿಜೆಪಿ ಸಾಧನಾ ಸಮಾವೇಶ ರದ್ದು, ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ದಳ ರಚನೆಗೆ ಸರ್ಕಾರ ನಿರ್ಧಾರ